ADVERTISEMENT

ಕಸ ವಿಲೇವಾರಿ ಜಾಗ ಮಂಜೂರಿಗೆ ಆಗ್ರಹ

ಅತ್ತಿಬೆಲೆ: ಪುರಸಭಾ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:10 IST
Last Updated 13 ಸೆಪ್ಟೆಂಬರ್ 2022, 6:10 IST
ಆನೇಕಲ್‌ನ ತಾಲ್ಲೂಕು ಕಚೇರಿಯಲ್ಲಿ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಪುರಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.
ಆನೇಕಲ್‌ನ ತಾಲ್ಲೂಕು ಕಚೇರಿಯಲ್ಲಿ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಪುರಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಪುರಸಭಾ ಸದಸ್ಯರು ಆನೇಕಲ್‌ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಅತ್ತಿಬೆಲೆ ಪುರಸಭಾ ಅಧ್ಯಕ್ಷೆ ಚಂದನಾ ಕುಮಾರ್‌ ಮಾತನಾಡಿ, ‘ಅತ್ತಿಬೆಲೆ ಪುರಸಭೆ 40-50 ಸಾವಿರ ಜನಸಂಖ್ಯೆ ಸಾಮರ್ಥ್ಯ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಮುಖ ಕೇಂದ್ರ. ಹೋಬಳಿ ಕೇಂದ್ರವೂ ಆಗಿರುವ ಅತ್ತಿಬೆಲೆಗೆ ಕಸ ವಿಲೇವಾರಿಗೆ ಸೂಕ್ತ ಸ್ಥಳ ಮಂಜೂರು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇತ್ತೀಚಿನ ದಿನದವರೆಗೆ ಅತ್ತಿಬೆಲೆಯ ಕೆರೆಯ ಒಂದು ಭಾಗದಲ್ಲಿ ಕಸ ವಿಲೇ ಮಾಡಲಾಗುತ್ತಿತ್ತು. ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಕಸ ವಿಲೇವಾರಿಗೆ ಜಾಗವಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಕಸ ತುಂಬಿ ಗಬ್ಬು ನಾರುತ್ತಿದೆ. ಪುರಸಭೆಗೆ ಕಸ ವಿಲೇವಾರಿಗೆ ಸ್ಥಳ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅವರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಜಾಗ ಮಂಜೂರು ಮಾಡಿಲ್ಲ. ಹಾಗಾಗಿ ಕಸ ವಿಲೇವಾರಿ ಸಾಧ್ಯವಾಗದೇ ಪುರಸಭೆಯು ಕೈಚೆಲ್ಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರು ಒಗ್ಗೂಡಿ ತಹಶೀಲ್ದಾರ್‌ ಅವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದೇವೆ. ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು
ತಿಳಿಸಿದರು.

ADVERTISEMENT

‘ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ 15 ದಿನಗಳಲ್ಲಿ ಸ್ಥಳ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಆದರೆ ಒಂದು ವರ್ಷವಾದರೂ ಬೇಡಿಕೆ ಈಡೇರಿಲ್ಲ. ಇತ್ತೀಚಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ್ದೆವು. ಆದರೆ ಪ್ರಯೋಜನೆ ಆಗಿಲ್ಲ. ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿಗೆ ಜಾಗ ಮಂಜೂರು ಮಾಡಲಾಗಿದೆ. ಆದರೆ ಹೋಬಳಿ ಕೇಂದ್ರ ಮತ್ತು ಕೈಗಾರಿಕ ಪ್ರದೇಶಕ್ಕೆ ಹೊಂದಿಕೊಂಡಿರುವ ಹೆಚ್ಚಿನ ಜನಸಂಖ್ಯೆ ಹೊಂದಿರುವ ಅತ್ತಿಬೆಲೆ ಪುರಸಭೆಗೆ ಸ್ಥಳ ಮಂಜೂರು ಮಾಡದೇ ತಾರತಮ್ಯ ಮಾಡಲಾಗುತ್ತಿದೆ’ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ತಿಮ್ಮಾರೆಡ್ಡಿ, ಸಿ.ಮುನಿರಾಜು, ಕೆ.ಗಣೇಶ್, ಕಾಂತಲಕ್ಷ್ಮಮ್ಮ, ರಾಜೇಶ್ವರಿ, ಸುವರ್ಣಮ್ಮ, ಮೀನಾ, ವಿಜಯಮ್ಮ, ರಮೇಶ್, ಎಸ್‌.ಕೆ.ಕುಮಾರ್‌, ರವಿಕುಮಾರ್‌, ಮುನಿರಾಜು, ನರಸಿಂಹಮೂರ್ತಿ, ಅಲ್ಲಬಕಾಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.