ADVERTISEMENT

ಮನೆ ನೋಂದಣಿಗೆ ನೇಕಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 4:15 IST
Last Updated 4 ಜನವರಿ 2022, 4:15 IST
ಆನೇಕಲ್‌ನ ಕೆಎಚ್‌ಡಿಸಿ ಕಾಲೊನಿಯ ನೇಕಾರರಿಗೆ ಮಂಜೂರಾದ ಮನೆಗಳನ್ನು ಫಲಾನುಭವಿಗಳಿಗೆ ನೋಂದಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಆನೇಕಲ್‌ನ ಕೆಎಚ್‌ಡಿಸಿ ಕಾಲೊನಿಯ ನೇಕಾರರಿಗೆ ಮಂಜೂರಾದ ಮನೆಗಳನ್ನು ಫಲಾನುಭವಿಗಳಿಗೆ ನೋಂದಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು   

ಆನೇಕಲ್: ‘ಪಟ್ಟಣದ ಕೆಎಚ್‌ಡಿಸಿ ಕಾಲೊನಿಯ ನೇಕಾರರಿಗೆ ಮಂಜೂರಾದ ಮನೆಗಳ ಮಾಲೀಕರಿಗೆ 38 ವರ್ಷಗಳು ಕಳೆದರೂ ನಿಗಮವು ನೋಂದಣಿ ಮಾಡಿಕೊಟ್ಟಿಲ್ಲ’ ಎಂದು ಆರೋಪಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

‘1983ರಲ್ಲಿ ಕೈಮಗ್ಗ ನೇಕಾರರಿಗೆ ಮನೆಗಳ ಮಂಜೂರಾತಿ ಮಾಡಲಾಗಿದೆ. ಸುಮಾರು 40 ವರ್ಷಗಳ ಹಿಂದೆ 102 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ. ಫಲಾನುಭವಿಗಳು ನಿಗಮ ನಿಗದಿ ಪಡಿಸಿದ ಹಣವನ್ನು ಪಾವತಿಸಿದ್ದರೂ ಮಾಲೀಕರಿಗೆ ನೋಂದಣಿ ಮಾಡಿಕೊಟ್ಟಿಲ್ಲ. 24 ವರ್ಷಗಳ ನಂತರ ಮನೆಗಳನ್ನು ಮಾಲೀಕರಿಗೆ ನೋಂದಣಿ ಮಾಡಿಕೊಡುವುದಾಗಿ ಕರಾರು ಪತ್ರದಲ್ಲಿ ತಿಳಿಸಲಾಗಿದೆ. ಆದರೆ 4 ದಶಕಗಳಾಗಿದ್ದರೂ ನೋಂದಣಿ ಮಾಡಿಕೊಟ್ಟಿಲ್ಲ’ ಎಂದು ದೂರಿದರು.

‘2012ರಲ್ಲಿಯೇ ಪೂರ್ಣ ಹಣ ಪಾವತಿ ಮಾಡಲಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಗಮನಹರಿಸಿಲ್ಲ. ನೇಕಾರಿಕೆ ಮಾಡುತ್ತಿರುವವರಿಗೆ ಸೂಕ್ತ ಕೆಲಸವು ನೀಡುತ್ತಿಲ್ಲ. ಮನೆಗಳ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ದಾಖಲೆಗಳಿಲ್ಲದೇ ನೇಕಾರ ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೂಡಲೇ ನೋಂದಣಿ ಮಾಡಿಸಿಕೊಡಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು’ ಎಂದು ನೇಕಾರರು ತಿಳಿಸಿದರು.

ADVERTISEMENT

ಆನೇಕಲ್‌ನ ನೇಕಾರ ಜನಾರ್ಧನ್‌ ಮಾತನಾಡಿ, ‘ಕೆಎಚ್‌ಡಿಸಿ ಬಡಾವಣೆ ನಿರ್ಮಿಸಿ ನೇಕಾರರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು ಸಾಲ ತೀರಿಸುವಂತೆ 38 ವರ್ಷಗಳ ಹಿಂದೆ ತಿಳಿಸಿ ಮಂಜೂರು ಮಾಡಲಾಗಿತ್ತು. ಇಲ್ಲಿಯೇ ನೇಕಾರಿಕೆ ಶೆಡ್‌ಯಿದ್ದು ನೂರಾರು ಮಂದಿಗೆ ಉದ್ಯೋಗ ನೀಡಲಾಗಿತ್ತು. ಆದರೆ ಈಗ ನೇಕಾರಿಕೆಯು ನಡೆಯುತ್ತಿಲ್ಲ. ಕೆಲಸ ಮಾಡಲು ಸಿದ್ಧವಿದ್ದರೂ ಉದ್ಯೋಗ ನೀಡುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ನಿಗಮದವರು ನೋಂದಣಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಶಿವಣ್ಣ ಭೇಟಿ ನೀಡಿ ಮಾತನಾಡಿ, ‘ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಮೂರು ತಿಂಗಳಲ್ಲಿ ಮಂಜೂರಾದ ಕುಟುಂಬಗಳಿಗೆ ನೋಂದಣಿ ಮಾಡಿಸಿಕೊಡಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖಂಡರಾದ ಮುನಿರಾಜು, ಮುರಳಿ, ಚಂದ್ರಾರೆಡ್ಡಿ, ವೆಂಕಟರಾಜಪ್ಪ, ಶ್ರೀನಿವಾಸ್‌, ಗೋಪಾಲ್‌, ಚಂದ್ರಶೇಖರ್‌, ಶಿವಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.