ADVERTISEMENT

ಕಲ್ಲುದಿಮ್ಮಿ ಕರಗಲು ಕಾರಣರು ಯಾರು!?

2015ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಡಿ ಐದು ಸಾವಿರಕ್ಕೂ ಹೆಚ್ಚು ದಿಮ್ಮಿಗಳು ವಶ

ವಡ್ಡನಹಳ್ಳಿ ಬೊಜ್ಯನಾಯ್ಕ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಮೀಸಗಾನಹಳ್ಳಿ ಬಳಿ ವಶಕ್ಕೆ ಪಡೆಯಲಾದ ಅಕ್ರಮ ಕಲ್ಲು ದಿಮ್ಮಿಗಳನ್ನು ಕಲ್ಲುಕಂಬಗಳಾಗಿ ಸೀಳಿರುವುದು
ಮೀಸಗಾನಹಳ್ಳಿ ಬಳಿ ವಶಕ್ಕೆ ಪಡೆಯಲಾದ ಅಕ್ರಮ ಕಲ್ಲು ದಿಮ್ಮಿಗಳನ್ನು ಕಲ್ಲುಕಂಬಗಳಾಗಿ ಸೀಳಿರುವುದು   

ದೇವನಹಳ್ಳಿ: ಕೆಲ ವರ್ಷಗಳ ಹಿಂದೆ ವಿವಿಧ ಇಲಾಖೆ ಅಧಿಕಾರಿಗಳು ಕಲ್ಲು ಗಣಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಕೋಟ್ಯಂತರ ಮೊತ್ತದ ಅಕ್ರಮ ಕಲ್ಲು ದಿಮ್ಮಿಗಳು ನಿಧಾನವಾಗಿ ಕರಗುತ್ತಿವೆ ಎಂಬ ಮಾತು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

2015ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ, ಜಿಲ್ಲಾ ಭೂ ಮತ್ತು ಗಣಿ ಇಲಾಖೆ ಮತ್ತು ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳು ಕಲ್ಲುಗಣಿಗಳ ಮೇಲೆ ದಾಳಿ ನಡೆಸಿ ಐದು ಸಾವಿರಕ್ಕೂ ಹೆಚ್ಚು ಅಕ್ರಮ ಕಲ್ಲು ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದರು. ಪ್ರತಿಯೊಂದು ದಿಮ್ಮಿಯ ಅಗಲ ಎತ್ತರ ಮತ್ತು ಉದ್ದವನ್ನು ಅಳತೆ ಮಾಡಿ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ವೇ ನಂಬರ್ ಅನ್ವಯ ಸಂಖ್ಯೆಗಳನ್ನು ದಿಮ್ಮಿಗಳ ಮೇಲೆ ನಮೂದಿಸಿದ್ದರು. ಅಂದು ವಶಪಡಿಸಿಕೊಂಡಿದ್ದ ಶೇ 50ರಷ್ಟು ಕಲ್ಲು ದಿಮ್ಮಿಗಳು ಈಗ ಇಲ್ಲ. ಕಲ್ಲುಗಣಿ ಮಾಫಿಯಾದವರಿಗೆ ಗಣಿ ಇಲಾಖೆ ಅಧಿಕಾರಿಗಳ ಪರೋಕ್ಷ ಬೆಂಬಲದಿಂದ ದಿಮ್ಮಿಗಳನ್ನು ರಾತ್ರೋರಾತ್ರಿ ಸಾಗಿಸುವುದು ಮತ್ತು ಬಿದ್ದಿರುವ ದಿಮ್ಮಿಗಳನ್ನೇ ಸೀಳಿ ತಂತಿ ಬೇಲಿಗೆ ಉಪಯೋಗಿಸುವ ಕಲ್ಲು ಕಂಬವನ್ನಾಗಿ ಮಾರ್ಪಡಿಸುತ್ತಿದ್ದಾರೆ ಎಂಬುದು ಸ್ಥಳೀಯ ಗ್ರಾಮಸ್ಥರ ಆರೋಪ.

ಬಹಿರಂಗವಾಗಿಯೇ ಅಕ್ರಮ ಕಲ್ಲುಗಣಿಯಲ್ಲಿ ದಿಮ್ಮಿ ತೆಗೆದಿದ್ದವರು, ಇವರ ಜತೆಗೂಡಿದ ಮತ್ತೆ ಕೆಲವರು ದಿಮ್ಮ ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಬಹಿರಂಗ ಹರಾಜು ಮಾಡಲು 2016ರ ಏ. 11ರಂದು ದಿನ ಪತ್ರಿಕೆಯಲ್ಲಿ ಪ್ರಕಟಣೆ ನೀಡಿತ್ತು. ಕೊಯಿರಾ, ಚಿಕ್ಕಗೊಲ್ಲಹಳ್ಳಿ, ಮಾಯಸಂದ್ರ ಮತ್ತು ಮೀಸಗಾನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕಲ್ಲುಗಣಿಗಾರಿಕೆಯಲ್ಲಿ ಅಕ್ರಮವಾಗಿ ತೆಗೆಯಲಾದ 2,848 ಗ್ರೇ– ಗ್ರಾನೈಟ್‌ಗಳ ಹರಾಜಿಗೆ ಕನಿಷ್ಠ ಖನಿಜ ಮಾರಾಟ ಬೆಲೆ ಒಟ್ಟು ಮೊತ್ತ ₹ 38.28 ಕೋಟಿ ನಿಗದಿಪಡಿಸಿತ್ತು. ಹರಾಜಿನಲ್ಲಿ ಭಾಗವಹಿಸುವವರು ಒಟ್ಟು ಮೊತ್ತದ ಶೇ 25ರಷ್ಟು ಇಎಂಡಿಯನ್ನು (ಡಿ.ಡಿ. ಮೂಲಕ ) ಹರಾಜು ಪ್ರಕ್ರಿಯೆ ಮುಗಿದ ನಂತರ ಬಿಡ್ ಪಡೆದವರು ನೀಡಬೇಕು ಎಂದು ಷರತ್ತು ವಿಧಿಸಿತ್ತು. ವಿಪರ್ಯಾಸವೆಂದರೆ ಹರಾಜು ಪ್ರಕ್ರಿಯೆ ಇಲಾಖೆ ನಿಯಮದಂತೆ ನಡೆಯದ ಕಾರಣ ಕೈಬಿಡಲಾಯಿತು ಎಂದು ಸ್ಥಳೀಯ ಮುಖಂಡರು ತಿಳಿಸಿದರು.

ADVERTISEMENT

ವಶಪಡಿಸಿಕೊಂಡ ಕಲ್ಲು ದಿಮ್ಮಿಗಳು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ವಿಶ್ವನಾಥಪುರ ಪೊಲೀಸ್ ಠಾಣೆ ಸುತ್ತಮುತ್ತ ಬಿದ್ದಿವೆ. ಆಯಾ ಗ್ರಾಮಗಳ ಕಲ್ಲುಗಣಿ ಒಳಗೆ ಮತ್ತು ಹೊರಗೆ, ರಸ್ತೆ ಅಕ್ಕಪಕ್ಕ ರೈತರ ಜಮೀನುಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ದಿಮ್ಮಿಗಳಿಗೆ ಕಾವಲುಗಾರರು ಇಲ್ಲ. ಕಂದಾಯ ಇಲಾಖೆ, ಭೂ ಮತ್ತು ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಿಗೆ ಅದು ಸಂಬಂಧಪಟ್ಟಿದ್ದರೂ ಅಧಿಕಾರಿಗಳು ಕಲ್ಲು ಕದಿಯುತ್ತಿರುವವರಿಗೆ ನೆರವಾಗುತ್ತಿರಬಹುದು ಎಂಬ ಅನುಮಾನ ಸ್ಥಳೀಯರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.