ಆನೇಕಲ್: ಹೆತ್ತವರು, ಹುಟ್ಟಿದ ಮನೆ–ಊರು ಬಿಟ್ಟು ಬಂದು ನನ್ನೊಂದಿಗೆ ಇಷ್ಟು ಕಾಲ ಅನ್ಯೋನ್ಯವಾಗಿ ಬದುಕುವ, ಕುಟುಂಬವನ್ನೆ ಪೊರೆಯುವ ಭೂತಾಯಿ ಗುಣದ ನಿನ್ನನ್ನು ಪಡೆಯಲು ತಪ್ಪಸ್ಸು ಮಾಡಿದ್ದೆ...
ಇಂತಹ ಪತ್ನಿಯನ್ನು ಹೊಗಳುವ ಮಾತು ಕೇಳಿ ಬಂದಿದ್ದು, ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ಪಟ್ಟಣಕ್ಕೆ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಪತ್ನಿ ಪ್ರಶಂಸಾ ದಿನ’ದಲ್ಲಿ.
ಕಾರ್ಯಕ್ರಮದಲ್ಲಿ ಪಾಲ್ಗೊಂಡ 300ಕ್ಕೂ ಹೆಚ್ಚು ಜೋಡಿಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಗಂಡಂದಿರು ತಮ್ಮ ಹೆಂಡತಿಯರಿಗೆ ಗುಲಾಬಿ ಹೂವು ನೀಡಿ ಹಾಡಿ ಹೊಗಳಿದರು.
ಹಿರಿ ಜೋಡಿಗಳಿಂದ ಇತ್ತೀಚಿಗೆ ವಿವಾಹವಾದವರು ಸಹ ಪಾಲ್ಗೊಂಡು ಪರಸ್ಪರ ಪ್ರೀತಿ, ಗೌರವದಿಂದ ಕಾಣುವ ಸಂಕಲ್ಪ ಮಾಡಿದರು.
ಪ್ರತಿಯೊಬ್ಬ ಪುರುಷನ ಯಶಸ್ಸಿನಲ್ಲಿ ಮಹಿಳೆಯ ಪಾತ್ರ ಇರುತ್ತದೆ. ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಪುರುಷನ ಯಶಸ್ಸಿಗೆ ಕೈಜೋಡಿಸುತ್ತಾಳೆ. ಹಾಗಾಗಿ ಮಹಿಳೆಯರನ್ನು ಪ್ರೀತಿ, ಗೌರವದಿಂದ ಕಾಣಬೇಕಾದ್ದು ಪುರುಷರ ಪ್ರಥಮ ಜವಾಬ್ದಾರಿ. ಪತ್ನಿ ಮತ್ತು ತಾಯಿಯೊಂದಿಗೆ ಮಾತನಾಡುವ ಪದಗಳು ದೇವರನ್ನು ಪೂಜಿಸುವ ಮಂತ್ರದಂತಿರಬೇಕು ಎಂದು ಟ್ರಸ್ಟ್ ಅಧ್ಯಕ್ಷ ಉಮಾಪತಿ ತಿಳಿಸಿದರು.
ವೇದಾದ್ರಿ ಮಹರ್ಷಿ ಧರ್ಮಪತ್ನಿ ಲೋಗಾಂಬಾಳ್ ಅವರ ಜನ್ಮದಿನದ ಪ್ರಯುಕ್ತ 21 ವರ್ಷದಿಂದ ಪತ್ನಿ ಪ್ರಶಂಸಾ ದಿನ ಆಚರಿಸಲಾಗುತ್ತಿದೆ. ವಿಚ್ಛೇದನ ಕಡಿಮೆ ಮಾಡಲು ಇಂತಹ ಆಚರಣೆಗಳು ಅವಶ್ಯಕವಾಗಿವೆ. ಪತ್ನಿ ಪತ್ನಿಯಲ್ಲಿ ಹೊಂದಾಣಿಕೆ, ಒಗ್ಗಟ್ಟು ಮೂಡಿಸುವುದು ನಮ್ಮ ಗುರಿ ಎಂದು ತಿಳಿಸಿದರು.
ವಿಶಾಲ ಕರ್ನಾಟಕನ ವಲಯ ಮುಖ್ಯಸ್ಥ ನಾಗರಾಜು, ಸ್ಕೈ ಟ್ರಸ್ಟ್‌ನ ಖಜಾಂಚಿ ಭಯರೇಗೌಡ, ಪದಾಧಿಕಾರಿಗಳಾದ ರಾಮಚಂದ್ರ ಪ್ರಸಾದ್, ಪದ್ಮನಾಭಯ್ಯ ಶಿವಗಾಮಿನಿ, ಸತೀಶ್, ರಮೇಶ್, ಭ್ರಮಾರಂಭ, ಸುಬ್ರಮಣಿ, ವೆಂಕಟಸ್ವಾಮಿರೆಡ್ಡಿ, ಸಂಪಂಗಿ ರಾಮನಾಯಕ್ ಇದ್ದರು.
ಪತ್ನಿಯು ಮನೆಗಳಲ್ಲಿ ಸಮಸ್ಯೆ ನುಂಗುವ ನೀಲಕಂಠರಾಗಿರುತ್ತಾರೆ. ಹಲವು ಒತ್ತಡಗಳ ನಡುವೆಯೂ ಕುಟುಂಬಕ್ಕಾಗಿ ಸಮಯ ಮತ್ತು ಪ್ರೀತಿ ನೀಡುವ ಕುರುಣಾಮಯಗಳು.ಗೋವಿಂದರಾಜ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.