ADVERTISEMENT

‘ಮಹಿಳೆಯರೇ ಸಾಲ ಮರು ಪಾವತಿಸುವವರು’

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 13:32 IST
Last Updated 1 ಜುಲೈ 2019, 13:32 IST
ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು
ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು   

ದೇವನಹಳ್ಳಿ: ‘ಬಸವಣ್ಣನ ‘ಕಾಯಕವೇ ಕೈಲಾಸ’ ಎಂಬ ತತ್ವ ಸಾರ್ವಕಾಲಿಕ ಶ್ರೇಷ್ಠ. ಅವರ ಚಿಂತನೆಗಳು ದೂರದೃಷ್ಠಿಯಿಂದ ಕೂಡಿದವು. ಅಂತಹ ಚಿಂತನೆಯ ಅರಿವಿರಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಶಿವಕುಮಾರಸ್ವಾಮಿ ವೃತ್ತದಲ್ಲಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ಸಂಘ, ವೀರಶೈವ ಮಹಿಳಾ ಸಂಘ ಹಾಗೂ ಅರ್ಚಕರ ಒಕ್ಕೂಟ ಸಹಭಾಗಿತ್ವದಲ್ಲಿ ನಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ನಂದಿ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ಪ್ರಗತಿಯ ಮಾರ್ಗಸೂಚಿ. ಭವಿಷ್ಯದ ಚಿಂತನೆಯಿಂದ ಸಂಘ ಆರಂಭಿಸಲಾಗಿದೆ. ಉದ್ದೇಶ ಸಫಲವಾಗಬೇಕಾದರೆ ಸಮುದಾಯದ ಪ್ರತಿಯೊಬ್ಬರೂ ಸಂಘದಲ್ಲಿ ನೋಂದಾಯಿಸಿಕೊಂಡು ಸಂಘದ ತತ್ವದಡಿಯಲ್ಲಿ ಕೆಲಸ ಮಾಡಬೇಕು. ಸಂಘದ ಪ್ರತಿಯೊಬ್ಬ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸಂಘ ಸಹಕಾರಿಯಾಗಲಿದೆ’ ಎಂದರು.

ADVERTISEMENT

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ‘ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ 500ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿದ್ದು ಶಿಸ್ತುಬದ್ಧ ಹಾಗೂ ಆರ್ಥಿಕವಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಸಕಾಲದಲ್ಲಿ ಸಾಲ ಮರು ಪಾವತಿಸುವವರು ಮಹಿಳೆಯರೇ ಆಗಿದ್ದಾರೆ’ ಎಂದು ಹೇಳಿದರು.

10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ವಿಜಯ್ ಕುಮಾರ್, ಪುರಸಭೆ ಸದಸ್ಯರಾದ ನಾಗೇಶ್, ವೈಸಿ.ಸತೀಶ್ ಕುಮಾರ್, ಮುಖಂಡರಾದ ಚಂದ್ರಮೌಳಿ, ಬಸವರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾದ್ಯಕ್ಷ ಬಿ.ಎಸ್.ಸಚ್ಚಿದಾನಂದ ಮೂರ್ತಿ, ವೀರಶೈವ ಸಮಾಜದ ಉಪಾಧ್ಯಕ್ಷ ನಾಗಭೂಷಣ್, ಕೆ.ಸದಾಶಿವಯ್ಯ, ಮಹಿಳಾ ಘಟಕ ಅಧ್ಯಕ್ಷೆ ಉಷಾ ಪೂರ್ಣಚಂದ್ರ, ನಿರ್ದೇಶಕರಾದ ವಿರೂಪಾಕ್ಷ.ಸಿ, ಶಶಿಕಲ ಕಾಂತರಾಜ್, ಎಂ.ವೀರಭದ್ರಪ್ಪ, ಎಸ್.ವಿರೂಪಾಕ್ಷಯ್ಯ, ಎ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.