ADVERTISEMENT

ಮಧುಮೇಹ ತಡೆಗೆ ಸಮತೋಲನ ಆಹಾರ, ವ್ಯಾಯಾಮ ಮುಖ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:30 IST
Last Updated 14 ನವೆಂಬರ್ 2019, 13:30 IST
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿದರು
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿದರು   

ದೊಡ್ಡಬಳ್ಳಾಪುರ: ಭಾರತದಲ್ಲಿ ಚಿಕ್ಕ ಮಕ್ಕಳು ಸೇರಿದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ. ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿಡಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ಹೇಳಿದರು.

ನಗರದ ಲಾವಣ್ಯ ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳು ಹಾಗೂ ಶ್ರೀರಾಮ ಆರೋಗ್ಯ ಸೇವಾ ಕೇಂದ್ರದ ವತಿಯಿಂದ ನಡೆದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನುವಂಶೀಯತೆ, ಬೊಜ್ಜು ದೇಹ, ಮದ್ಯಪಾನ, ಧೂಮಪಾನ ಮೊದಲಾದ ಚಟಗಳು ಮಧುಮೇಹಕ್ಕೆ ದಾರಿಯಾಗಿದ್ದು, ಇದರೊಂದಿಗೆ ಒತ್ತಡದ ಬದುಕು, ದೈಹಿಕ ಚಟುವಟಿಕೆ ಇಲ್ಲದಿರುವುದು, ಅನಿಯಮಿತ ಆಹಾರ ಪದ್ಧತಿ ಮೊದಲಾದ ಸಂಗತಿಗಳೂ ಮಧುಮೇಹಕ್ಕೆ ಕಾರಣ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ, ರೋಗ ನಿಯಂತ್ರಣದ ಅಂಶಗಳನ್ನು ತಿಳಿಸುವ ಸಲುವಾಗಿ ಆಚರಿಸಲಾಗುವ ಮಧುಮೇಹ ದಿನಾಚರಣೆ ದಿನದಂದು ಜಗತ್ತಿನಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕುಟುಂಬದೊಂದಿಗಿನ ಅವಿನಾಭಾವ ಸಂಬಂಧಕ್ಕೆ ಪೂರಕವಾಗಿ ಕುಟುಂಬ ಮತ್ತು ಮಧುಮೇಹ ಈ ವರ್ಷದ ಧ್ಯೇಯ ವಾಕ್ಯವಾಗಿದೆ ಎಂದರು.

ADVERTISEMENT

‘ಸಂಭ್ರಮದ ದಿನಾಚರಣೆಗಳಂತೆ ಇಂದು ಕಾಯಿಲೆಗಳಿಗೂ ಸಹ ದಿನಾಚರಣೆಯನ್ನು ಆಚರಿಸುವ ಸನ್ನಿವೇಶ ಬಂದೊದಗಿದೆ. ಆಧುನಿಕ ಯುಗದಲ್ಲಿ ನಾವು ದೇಹಕ್ಕೆ ಸಾಕಷ್ಟು ವ್ಯಾಯಾಮ ಹಾಗೂ ಸಮತೋಲನ ಆಹಾರ ನೀಡುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದು. ಮಧುಮೇಹ ಬರೀ ರಕ್ತ ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶ್ಚಕ್ತಿ ಮಾಡುವುದಷ್ಟೇ ಅಲ್ಲದೇ, ಮಧುಮೇಹದಿಂದ ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹಿಗಳಿದ್ದಾರೆ’ ಎಂದರು.

‘ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣದಲ್ಲಿ ಕಡಿಮೆಯಾಗುವುದರಿಂದ ರಕ್ತದಲ್ಲಿರುವ ಸಿಹಿ ಅಂಶವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಕಷ್ಟವಾಗುವ ಪರಿಸ್ಥಿತಿ ಎದುರಾಗುತ್ತದೆ. ಮಕ್ಕಳಿಂದ ಹಿಡಿದು ಯಾವುದೇ ವಯೋಮಾನದವರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅತಿ ಹೆಚ್ಚು 60 ವರ್ಷ ಮೇಲ್ಪಟ್ಟವರಲ್ಲಿಯೇ ಮಧುಮೇಹ ಹೆಚ್ಚಾಗಿ ಬಾಧಿಸಲ್ಪಡುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ಲೋಕೇಶ್, ಲಾವಣ್ಯ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವಾಸ್ ಗೌಡ, ಮುಖಂಡರಾದ ರಾಘವ, ಚಂದ್ರಣ್ಣ, ಲಾವಣ್ಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋಪಾಲ್, ಉಪ ಪ್ರಾಂಶುಪಾಲ ಕೃಷ್ಣಮೂರ್ತಿ, ಲಾವಣ್ಯ ಪದವಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.