ADVERTISEMENT

ವಿಶ್ವ ಹಾವುಗಳ ದಿನ | ಹಾವು ಕಡಿತ; ಆತಂಕ ಬೇಡ

ನಟರಾಜ ನಾಗಸಂದ್ರ
Published 16 ಜುಲೈ 2025, 1:50 IST
Last Updated 16 ಜುಲೈ 2025, 1:50 IST
ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಳಲ್ಲಿ ಕಂಡು ಬರುವ ಹಸಿರು ಕೀಲ್ಬ್ಯಾಕ್
ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಳಲ್ಲಿ ಕಂಡು ಬರುವ ಹಸಿರು ಕೀಲ್ಬ್ಯಾಕ್   

ದೊಡ್ಡಬಳ್ಳಾಪುರ: ಹಾವುಗಳ ಬಗ್ಗೆ ಜನರಲ್ಲಿ ಮನೆ ಮಾಡಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜನರಲ್ಲಿ ಅರಿವು ಮೂಡಿಸಲು ಜುಲೈ 16 ರಂದು ವಿಶ್ವ ಹಾವು ದಿನವನ್ನಾಗಿ ಆಚರಿಸಲಾಗುತ್ತದೆ.

ಸರಿಸೃಪ ವರ್ಗಕ್ಕೆ ಸೇರಿದ ಹಾವುಗಳು ಮನುಷ್ಯನಿಗಿಂತಲೂ ಮೊದಲೇ ಭೂಮಿಯ ಮೇಲಿವೆ. ಹಿಮಚ್ಛಾದಿತ ಅಂಟಾರ್ಟಿಕ ಪ್ರದೇಶ  ಹೊರತು ಪಡಿಸಿ ಭೂಮಿಯ ಎಲ್ಲೆಡೆ ವಾಸಿಸುತ್ತವೆ. ಜಾಗತಿಕವಾಗಿ 3,500, ಭಾರತದಲ್ಲಿ 300 ಹಾಗೂ ರಾಜ್ಯದಲ್ಲಿ 90 ಪ್ರಭೇದಗಳನ್ನು ಗುರುತಿಸಲಾಗಿದೆ. 

90 ಪ್ರಭೇದಗಳಲ್ಲಿ ಕೇವಲ 20 ಪ್ರಭೇದದ ಹಾವುಗಳು ಮಾತ್ರ ವಿಷಪೂರಿತ ಮತ್ತು ಮೃದು ವಿಷಪೂರಿತ ಹಾವುಗಳಾಗಿವೆ. ಹತ್ತು ಸೆಂಟಿ ಮೀಟರ್‌ನಷ್ಟು ಪುಟ್ಟದಾದ ಥ್ರೆಡ್‌ ಸ್ನೇಕ್‌ನಿಂದ 11 ಮೀಟರ್‌ ಬೃಹತ್‌ ರಿಟಿಕ್ಯುಲೇಟೆಡ್‌ ಹೆಬ್ಬಾವಿನವರೆಗೂ ವೈವಿದ್ಯಮಯ ಹಾವುಗಳು  ಭಾರತದಲ್ಲಿವೆ. ಪ್ರದೇಶಗಳಿಗೆ ತಕ್ಕಂತೆ ವೈವಿಧ್ಯಮಯ ಹಾವು ಕಾಣ ಸಿಗುತ್ತವೆ. ಬೇರೆ ಹಾವು ತಿಂದು ಬದುಕುವ ಹಾವುಗಳೂ ಇವೆ.

ADVERTISEMENT

ಹೆಚ್ಚಿನ ಹಾವು ಕಡಿತ ಪ್ರಕರಣ ಭಾರತದಲ್ಲಿ ವರದಿಯಾಗುತ್ತವೆ. ಅಷ್ಟೊಂದು ಅಪಾಯಕಾರಿ ಅಲ್ಲದ ವಿಷರಹಿತ ಹಾವು ಕಡಿದರೂ ಹೆದರಿಕೆಯಿಂದಲೇ ಹೆಚ್ಚಿನ ಸಾವು ಸಂಭವಿಸುತ್ತವೆ. ವಿಷಪೂರಿತ ಹಾವು ಕಡಿತಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ.

ಹಾವಿಗೆ ವಿಷ ಅಸ್ತ್ರ. ಅದನ್ನು ಅನಗತ್ಯ ವ್ಯಯಿಸಲು ಇಷ್ಟವಿರುವುದಿಲ್ಲ. ಹಾವುಗಳು ಕಡಿಯುವ ಮೊದಲು ಎಚ್ಚರಿಕೆ ನೀಡುತ್ತವೆ. ಕೆಲವೊಮ್ಮೆ ಹೆದರಿಸಲು ಇಲ್ಲವೇ ಆತ್ಮರಕ್ಷಣೆಗೆ ವಿಷ ಬಿಡದೆ ಕಚ್ಚಿರುತ್ತವೆ. ಇದಕ್ಕೆ ಡ್ರೈಬೈಟ್‌ ಎನ್ನುತ್ತಾರೆ. ಹಾವು ಕಚ್ಚಿ ಸಾಯುವ ಮನುಷ್ಯರಿಗಿಂತ ಮನುಷ್ಯರಿಂದ ಸಾಯುವ ಹಾವುಗಳಿಗೆ ಲೆಕ್ಕವೇ ಇಲ್ಲ ಎನ್ನುತ್ತಾರೆ ಪ್ರಾಣಿ ತಜ್ಞ ವೈ.ಟಿ.ಲೋಹಿತ್‌.

ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಳಲ್ಲಿ ಕಂಡು ಬರುವ ವೆರಿಗೇಟೆಡ್ ಕುಕ್ರಿ
ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಳಲ್ಲಿ ಕಂಡು ಬರುವ ಬಿದಿರು ಮಂಡಲ
ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಳಲ್ಲಿ ಕಂಡು ಬರುವ ನಾಗರಹಾವು

ಹಾವು ಕಡಿತ ಆತಂಕ ಬೇಡ

ನಾಗರಹಾವು ಕೊಳಕು ಮಂಡಲ (ಕನ್ನಡಿ ಹಾವು) ಉರಿ ಮಂಡಲ (ಗರಗಸ) ಮತ್ತು ಕಟ್ಟು ಹಾವು ವಿಷಪೂರಿತ. ಮಳೆಗಾಲದಲ್ಲಿ ಹಾವುಗಳ ಓಡಾಟ ಹೆಚ್ಚು. ಮನೆ ಸುತ್ತ ಕಳೆ ಬೆಳೆಯಲು ಬಿಡಬಾರದು. ಮನೆಗಳ ಹೊರಗೆ ಶೂ ಧರಿಸುವಾಗ ಕದಲಿಸಿ ಗಮನಿಸಬೇಕು. ಕೃಷಿಕರು ರಾತ್ರಿ ಹೊಲದಲ್ಲಿ ಸಂಚರಿಸುವಾಗ ಚಪ್ಪಲಿ ಬದಲು ಶೂ ಅಥವಾ ಗಮ್ ಬೂಟ್ ಧರಿಸಬೇಕು. 90 ಪ್ರಭೇದಗಳಲ್ಲಿ 20 ಬಗೆಯ ಹಾವು ಮಾತ್ರ ವಿಷಪೂರಿತ. ಹಾವು ಕಡಿದಾಗ ಆಂತಕಕ್ಕೆ ಒಳಗಾಗಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.