ADVERTISEMENT

ದೇವನಹಳ್ಳಿ: ನರಮಂಡಲ ಚೈತನ್ಯಕ್ಕೆ ಯೋಗ ಮದ್ದು

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 4:47 IST
Last Updated 29 ಜನವರಿ 2023, 4:47 IST
ದೇವನಹಳ್ಳಿ ಪಟ್ಟಣದಲ್ಲಿ ರಥಸಪ್ತಮಿ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು
ದೇವನಹಳ್ಳಿ ಪಟ್ಟಣದಲ್ಲಿ ರಥಸಪ್ತಮಿ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು   

ದೇವನಹಳ್ಳಿ: ರಥಸಪ್ತಮಿ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಪಟ್ಟಣದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಮಾಡಲಾಯಿತು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ಪ್ರತಿವರ್ಷವೂ ರಥಸಪ್ತಮಿ ದಿನ ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ಮಾಡಲಾಗುತ್ತದೆ. ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ನರಮಂಡಲ ಚೈತನ್ಯಗೊಳ್ಳಲಿದೆ. ಜೀರ್ಣಶಕ್ತಿ ಹೆಚ್ಚುತ್ತದೆ. ರಕ್ತ ಪರಿಚಲನೆ ಕ್ರಮಬದ್ಧವಾಗುತ್ತದೆ ಎಂದು ತಿಳಿಸಿದರು.

ಚರ್ಮದ ಕಾಂತಿಯೂ ಹೆಚ್ಚುತ್ತದೆ. ಮೈ ಮನಸ್ಸುಗಳ ಆರೋಗ್ಯ ಪ್ರತೀಕವಾದ ಸೂರ್ಯ ಸ್ಥಾನವನ್ನು ಎಲ್ಲರೂ ಮಾಡಬಹುದು. ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಇದರಿಂದ ದೊರೆಯುವ ಪ್ರಯೋಜನಗಳು ಹೆಚ್ಚಿವೆ. ಸೂರ್ಯನ ಕಿರಣಗಳಲ್ಲಿರುವ ವಿವಿಧ ಬಣ್ಣಗಳು ಮನುಷ್ಯನ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ADVERTISEMENT

ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ನೆರಗನಹಳ್ಳಿ ಶ್ರೀನಿವಾಸ್‌ ಮಾತನಾಡಿ, ಯೋಗಾಸನಗಳಲ್ಲಿ ಸೂರ್ಯ ನಮಸ್ಕಾರಕ್ಕೆ ವಿಶೇಷ ಸ್ಥಾನವಿದೆ. ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆ ಮೇಲೆ ವಿಶೇಷ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಭೂಮಿಯಲ್ಲಿನ ಸಕಲ ಜೀವರಾಶಿಯ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ. ನೇಸರ ಇಲ್ಲದೆ ಏನೂ ನಡೆಯದು. ಇಂಥ ಸೂರ್ಯ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಸಹ ಸಂಚಾಲಕ ತುಪ್ಪದ ಸುರೇಶ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಯೋಗಾಸನ ಮಾಡಬೇಕು. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಯೋಗಾಭ್ಯಾಸ ಅತಿಮುಖ್ಯ ಎಂದು ಹೇಳಿದರು.

ಖಜಾಂಚಿ ವಿನಯ್‌ಕುಮಾರ್, ಶಿಕ್ಷಕ ಪ್ರಮುಖ್‌ ನಾಗೇಶ್, ಗಾಯತ್ರಿ, ಜಿಲ್ಲಾ ಸಹ ಸಂಚಾಲಕ ಸುರೇಶ್‌ಕುಮಾರ್, ಶಿಕ್ಷಣ ಪ್ರಮುಖ್‌ ಹೇಮಾವತಿ, ಅಂಬುಜಾ, ಸುನಂದ, ಸಂಘಟನಾ ಪ್ರಮುಖ್‌ ಸತೀಶ್, ಸರಸ್ಪತಿ, ವರದಿ ಪ್ರಮುಖ್‌ ಮಹಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.