ADVERTISEMENT

ಬಿಬಿಎಂಪಿ ಕಸದ ಲಾರಿಗೆ ಯುವಕ ಬಲಿ

ಸಂತ್ರಸ್ತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ l ₹5 ಲಕ್ಷ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 2:52 IST
Last Updated 5 ಸೆಪ್ಟೆಂಬರ್ 2022, 2:52 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಗೇನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ಕಸ ತುಂಬಿದ್ದ ಲಾರಿ ರಸ್ತೆ ಬದಿಯಲ್ಲಿ ತಲೆಕೆಳಗಾಗಿ ಬಿದ್ದಿರುವುದು
ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಗೇನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ಕಸ ತುಂಬಿದ್ದ ಲಾರಿ ರಸ್ತೆ ಬದಿಯಲ್ಲಿ ತಲೆಕೆಳಗಾಗಿ ಬಿದ್ದಿರುವುದು   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ಬಿಬಿಎಂಪಿಯ ಕಸ ತುಂಬಿದ್ದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಮೂಗೇನಹಳ್ಳಿ ಗೇಟ್‌ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೂಗೇನಹಳ್ಳಿ ಗ್ರಾಮದ ಸಂಬಂಧಿಕರಮನೆಗೆ ಬೈಕ್‌ನಲ್ಲಿ ತೆರಳುವಾಗ ಸಂಭವಿಸಿದ ಅಪಘಾತದಲ್ಲಿ ಮಾವಿನಕುಂಟೆ ಗ್ರಾಮದ ನಿವಾಸಿ ರಾಜು(28) ಮೃತಪಟ್ಟಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಶವವನ್ನು ರಸ್ತೆಯಿಂದ ತೆರವು ಮಾಡಲು ಅವಕಾಶ ನೀಡದೆ, ಶವವನ್ನು ಇಟ್ಟುಕೊಂಡು ಪ್ರತಿಭಟನೆಗೆ ಮುಂದಾದರು. ಇದರಿಂದಾಗಿರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಭಾರಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು.

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಆದರೆ, ಗ್ರಾಮಸ್ಥರು ರಸ್ತೆ ಪಕ್ಕದಲ್ಲೇ ಪ್ರತಿಭಟನೆ ಮುಂದುವರಿಸಿದರು.ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.

‘ಕಸ ತುಂಬಿಕೊಂಡು ಬರುವ ಬಿಬಿಎಂಪಿ ಲಾರಿಗಳಿಂದ ನಡೆದ ಅಪಘಾತದಲ್ಲಿ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದಾರೆ.ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಸ್ಥಳಕ್ಕೆ ಬಂದ ಶಾಸಕ ಟಿ.ವೆಂಕಟರಮಣಯ್ಯ ಆಗ್ರಹಿಸಿದರು.

ಸ್ಥಳಕ್ಕೆ ಬಂದ ಬಿಬಿಎಂಪಿ ಎಂಜಿನಿಯರ್‌ ಮಮತಾ ಅವರನ್ನು ಶಾಸಕ ಸೇರಿದಂತೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಈ ಭಾಗದ ಜನರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಬೆಂಗಳೂರಿನ ಕಸ ಹೊರಗೆ ಕಳುಹಿಸಲು ಇರುವ ಕಾಳಜಿ, ಕಸ ವಿಲೇವಾರಿ ಬಗ್ಗೆ ಇಲ್ಲ. ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮೃತನ ಕುಟುಂಬಕ್ಕೆ ಸ್ಥಳದಲ್ಲೇ ₹5 ಲಕ್ಷ ಚೆಕ್ ನೀಡಲಾಯಿತು. ವಾರದ ಒಳಗಾಗಿ ₹20 ಲಕ್ಷ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.