ADVERTISEMENT

ದೊಡ್ಡಬಳ್ಳಾಪುರ: ನಡುರಸ್ತೆಯಲ್ಲೇ ಯುವಕನ ಕೊಚ್ಚಿ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 3:15 IST
Last Updated 6 ಡಿಸೆಂಬರ್ 2025, 3:15 IST
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ರಸ್ತೆಯಲ್ಲಿ ಯುವಕನ ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ರಸ್ತೆಯಲ್ಲಿ ಯುವಕನ ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ   

ದೊಡ್ಡಬಳ್ಳಾಪುರ: ನಗರದ ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ತಾಯಿಯೊಂದಿಗೆ ವಾಸವಿದ್ದ ಯುವಕನನ್ನು ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. 

ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿಯ ಪವನ್(27) ಮೃತ ಯುವಕ.

ಗುರುವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಡಿ.ಕ್ರಾಸ್ ಕಡೆಯಿಂದ ಪ್ರವಾಸಿ ಮಂದಿರ ವೃತ್ತದ ಮಾರ್ಗವಾಗಿ ಆಟೊ ಚಾಲನೆ ಮಾಡಿಕೊಂಡು ಹೋಗುವಾಗ ಹಿಂದಿನಿಂದ ಕಾರಿನಲ್ಲಿ ಬಂದಿರುವ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಪವನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪವನ್‌ ಐ ಪೋನ್‌ ತಯಾರಿಕಾ ಘಟಕ ಪಾಕ್ಸ್‌ಕಾನ್‌ ಕಂಪನಿಗೆ ಕಾರ್ಮಿಕರನ್ನು ಕರೆದೊಯ್ಯುವ ಬಸ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಸಹ ಚಾಲಕರೊಂದಿಗೆ ಇತ್ತೀಚೆಗೆ ಜಗಳಮಾಡಿಕೊಂಡಿದ್ದ. ಅಲ್ಲದೆ ಪಾಲನಜೋಗಹಳ್ಳಿಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಈ ಎರಡು ವಿಚಾರಗಳಲ್ಲಿ ಯಾವುದಕ್ಕೆ ಕೊಲೆ ನಡೆದಿದೆ ಎಂಬ ನಿಖರ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ. ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ನಗರ ಠಾಣೆ ಇನ್‌ಸ್ಪೆಕ್ಟರ್‌ ಅಮರೇಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಪವನ್‌
ಕೊಲೆಯಾದ ವ್ಯಕ್ತಿ ಆಟೊ ಇಟ್ಟುಕೊಂಡಿದ್ದರು. ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎನ್ನುವ ಬಗ್ಗೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು.
ಎಸ್‌.ಪಾಂಡುರಂಗ ಡಿವೈಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.