ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣದಲ್ಲಿನ ಜಮೀನು ಸ್ಥಳ ಪರಿಶೀಲನೆಗೆ ಮಂಗಳವಾರ ಆಗಮಿಸಿದ್ದ ಅಧಿಕಾರಿಗಳನ್ನು ಸ್ಥಳೀಯ ಗ್ರಾಮಸ್ಥರು ತರಾಟೆ ತೆಗೆದುಕೊಂಡು ಹಿಂದಕ್ಕೆ ಕಳುಹಿಸಿದ್ದಾರೆ.
ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹ ಮಾಡಲು ಜಲಾಶಯ ನಿರ್ಮಾಣಕ್ಕೆ ಲಕ್ಕೇನಹಳ್ಳಿ ಸೇರಿದಂತೆ ಐದು ಗ್ರಾಮಗಳು ಮುಳುಗಡೆಯಾಗಲಿದೆ. ಈ ಗ್ರಾಮಗಳ ರೈತರು ಈಗಾಗಲೇ ಹೋರಾಟ ಪ್ರಾರಂಭಿಸಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಮಂಗಳವಾರ ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ಸರ್ವೆ ಕೆಲಸ ನಡೆಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ನರಸಾಪುರ, ವಡೇರಹಳ್ಳಿ, ಬೆಣಚಿಹಟ್ಟಿ ಗ್ರಾಮಗಳ ರೈತರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನರಸಾಪುರ ಗ್ರಾಮದ ರೈತ ಕೆಂಪರಾಜ್ ‘ನಮ್ಮ ಸ್ವಂತ ಜಮೀನುಗಳಿಗೆ ಯಾವುದೇ ಸೂಚನೆ ನೀಡದೆ ಅಥವಾ ಅಧಿಕೃತವಾಗಿ ನೋಟಿಸ್ ನೀಡದೆ ಯಾರೇ ಪ್ರವೇಶ ಮಾಡಿದರೂ ಕಾನೂನು ಕ್ರಮಕೈಗೊಳ್ಳುವ ಮೂಲಕ ದೂರು ದಾಖಲಿಸಲಾಗುವುದು. ಮಂಗಳವಾರ ಸ್ಥಳ ಪರಿಶೀಲನೆ ನೆಪದಲ್ಲಿ ಬಂದಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ‘ನಮ್ಮ ಊರು ನಮ್ಮ ಹೆಮ್ಮೆ’ ಯಾವುದೇ ಕಾರಣಕ್ಕೂ ನಮ್ಮ ಹಿರಿಯರು ಹುಟ್ಟಿ ಬೆಳೆದಿರುವ ಊರನ್ನು ಜಲಾಶಯದಲ್ಲಿ ಮುಳುಗಡೆಯಾಗಲು ಬಿಡುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.