ADVERTISEMENT

ಸಾಂಪ್ರದಾಯಿಕವಾಗಿ ನೆರವೇರಿದ  ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ

ಕೊರೊನಾ ಭೀತಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 15:46 IST
Last Updated 16 ಮಾರ್ಚ್ 2020, 15:46 IST
ಶನಿವಾರಸಂತೆ ಸಮೀಪದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ನಡೆದ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು
ಶನಿವಾರಸಂತೆ ಸಮೀಪದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ನಡೆದ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು   

ಶನಿವಾರಸಂತೆ: ಪಟ್ಟಣದಿಂದ 8 ಕಿ.ಮೀ.ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ 400 ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ಶ್ರೀಬಾವಿ ಬಸವಣ್ಣ ಉದ್ಭವ ಮೂರ್ತಿ ದೇವರ ಆರಾಧನಾ ಮಹೋತ್ಸವ ಕೊರೊನಾ ಭೀತಿಯ ನಡುವೆಯೂ ಸೋಮವಾರ ಸರಳವಾಗಿ, ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸುತ್ತಮುತ್ತಲಿನ ಸ್ಥಳೀಯ ವಿವಿಧ ಗ್ರಾಮಗಳಿಂದ ಹಾಗೂ ಸ್ಥಳೀಯ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಭಕ್ತರು ಭಕ್ತಿಯಿಂದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ವಿಶೇಷತೆ: ಪ್ರತಿವರ್ಷ ಶಿವರಾತ್ರಿ ನಂತರ ಯುಗಾದಿ ಹಬ್ಬದ ಒಳಗೆ ಇಲ್ಲಿ ವಾರ್ಷಿಕ ವಿಶೇಷ ಪೂಜೆ ನಡೆಯುವುದು ಸಂಪ್ರದಾಯವಾಗಿದೆ.

ADVERTISEMENT

ಪ್ರಕೃತಿಯ ಹಸಿರ ಸಿರಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ಗುಡಿಯಿದೆ.ಕೆಳಭಾಗದಲ್ಲಿ ಸಿಹಿ ನೀರಿನ ತೀರ್ಥ ಕೊಳವಿದೆ.ಇದಕ್ಕೆ ಹೊಂದಿಕೊಂಡಂತೆ ಕೆರೆ ಇದೆ.ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹೂ-ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ತೀರ್ಥದ ಕೊಳಕ್ಕೆ ಹರಕೆ ರೂಪದಲ್ಲಿ ಹಿಂಡುಗಟ್ಟಲೆ ನಾಣ್ಯ ಹಾಕಿ ಮನೆಗೆ ತೀರ್ಥ ತೆಗೆದುಕೊಂಡು ಹೋದರು.

ಭಕ್ತರು ತೀರ್ಥ ಕೊಳಕ್ಕೆ ಹಾಕುವ ನಾಣ್ಯಗಳನ್ನು ಸಂಗ್ರಹಿಸಿ ಮರು ವರ್ಷದ ಪೂಜಾ ಕಾರ್ಯಕ್ರಮಕ್ಕೆ ಸದ್ಬಳಕೆ ಮಾಡಿಕೊಳ್ಳುತ್ತಾರೆ. ಉದ್ಭವ ಬಸವಣ್ಣ ಮೂರ್ತಿಯಿಂದ ಹರಿದು ಬರುವ ನೀರು ಪಕ್ಕದ ತೀರ್ಥಕೊಳಕ್ಕೆ ಸೇರಿಕೊಳ್ಳುವುದರಿಂದ ವರ್ಷಪೂರ್ತಿ ನೀರು ಸಂಪನ್ನವಾಗಿ ಹರಿಯುತ್ತದೆ. ಗ್ರಾಮಸ್ಥರು ಮನೆಗಳಿಂದ ಅಕ್ಕಿಬೆಲ್ಲ, ತರಕಾರಿ, ತೆಂಗಿನಕಾಯಿ ಪ್ರಸಾದ ತಯಾರಿಕೆಗಾಗಿ ನೀಡುತ್ತಾರೆ.

ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ವಿವಿಧ ಕಾಯಿಲೆ ವಾಸಿಯಾಗುವುದು ಎಂಬ ನಂಬಿಕೆ ರೈತರಲ್ಲಿದೆ.

ಉತ್ಸವಕ್ಕೆ ಬಂದಿದ್ದ ಹಲವು ಭಕ್ತರು ತಮ್ಮ ಮಕ್ಕಳ ಮುಡಿ ತೆಗೆಸಿದರು. ಹರಕೆ ಹೊತ್ತವರು 101 ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು.

ಕೊರೋನ ಭೀತಿ ಹಿನ್ನಲೆಯಲ್ಲಿ ಪೂಜಾ ಕಾರ್ಯಕ್ರಮದ ಕುರಿತು ಪ್ರಚಾರ ನಡೆಯಲಿಲ್ಲ.ಹಾಗಾಗಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಗ್ರಾಮ ಮುಖಂಡರು ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು. ಯುವಕರ ತಂಡ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.