ADVERTISEMENT

ಅಂಬೇಡ್ಕರ್‌ ಭವನ ಉದ್ಘಾಟನೆಗೆ ಗ್ರಹಣ

ನಿರ್ಮಾಣವಾಗಿ ಎರಡೂವರೆ ವರ್ಷವಾದರೂ ಬಳಕೆಗೆ ಲಭ್ಯವಾಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 29 ಮೇ 2018, 6:55 IST
Last Updated 29 ಮೇ 2018, 6:55 IST
ಅಥಣಿಯಲ್ಲಿ ಅಂಬೇಡ್ಕರ್‌ ಭವನಕ್ಕೆ ಬೀಗ ಹಾಕಿರುವುದು
ಅಥಣಿಯಲ್ಲಿ ಅಂಬೇಡ್ಕರ್‌ ಭವನಕ್ಕೆ ಬೀಗ ಹಾಕಿರುವುದು   

ಅಥಣಿ: ಇಲ್ಲಿನ ಅಂಬೇಡ್ಕರ್‌ ವೃತ್ತದ ಸಮೀಪದಲ್ಲಿ ನಿರ್ಮಿಸಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದ ಉದ್ಘಾಟನೆಗೆ ಬರೋಬ್ಬರಿ ಎರಡೂವರೆ ವರ್ಷಗಳಿಂದಲೂ ಮುಹೂರ್ತ ಕೂಡಿಬಂದಿಲ್ಲ!

2012ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭವನದ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ಬಿಡುಗಡೆ
ಯಾಗಿತ್ತು. 2013ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. 2015ರ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣ
ಗೊಂಡಿದೆ. ನಂತರ, ಸಿದ್ಧವಾದರೂ ಬಳಕೆಗೆ ಬಾರದಂತಹ ಸ್ಥಿತಿ ಇದೆ. ಇದು ಅಂಬೇಡ್ಕರ್‌ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.

464.51 ಚ.ಅಡಿ ಜಾಗದಲ್ಲಿ ಭವನ ಮೈದಳೆದಿದೆ. 500 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಬಹುದಾದ ಸಭಾಂಗಣವಿದೆ. ಎರಡು ಕೊಠಡಿಗಳಿವೆ. ಗ್ರಂಥಾಲಯಕ್ಕಾಗಿ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಊಟದ ಸಭಾಂಗಣವಿದೆ. ಭವನ ಸಿದ್ಧಗೊಂಡು ವರ್ಷದ ನಂತರ, ₹ 20 ಲಕ್ಷ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಇದನ್ನು ವಿವಿಧ ಸಭೆ, ಸಮಾರಂಭಗಳಿವೆ ಬಳಸುವ ಅವಕಾಶಗಳಿವೆ.

ADVERTISEMENT

ಬಿಜೆಪಿ ಸರ್ಕಾರವಿದ್ದಾಗ: ‘ಭವನಕ್ಕೆ ₹ 1 ಕೋಟಿಯನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತು. ಕಾಂಪೌಂಡ್‌ಗೆ ವೆಚ್ಚವಾದ ₹ 20 ಲಕ್ಷವನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಭವನವನ್ನು ಯಾರು ಉದ್ಘಾಟನೆ ಮಾಡಬೇಕು ಎನ್ನುವುದನ್ನು ರಾಜಕಾರಣಿಗಳು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು. ಈ ರಾಜಕೀಯ ಕಾರಣಗಳಿಂದಾಗಿ ಕಟ್ಟಡದ ಉದ್ಘಾಟನೆ ಸಾಧ್ಯವಾಗಿಲ್ಲ. ಹೆಚ್ಚುವರಿ ಹಣ ಪಾವತಿಸುವಂತೆ ಗುತ್ತಿಗೆದಾರರು ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಭವನವನ್ನು ಸಾರ್ವಜನಿಕರಿಗೆ ಸಮರ್ಪಿಸುವುದಕ್ಕೆ ಮುಹೂರ್ತ ಕೂಡಿಬಂದಿಲ್ಲ’ ಎಂದೂ ಹೇಳಲಾಗುತ್ತಿದೆ.

ಈ ಭವನಕ್ಕೆ ಉದ್ಘಾಟನೆಗೂ ಮುನ್ನವೇ ಸಂಕಷ್ಟವೊಂದು ಎದುರಾಗಿದೆ. ರಸ್ತೆ ವಿಸ್ತರಣೆ ಮಾಡಿದರೆ, ಭವನದ ಕಾಂಪೌಂಡ್‌ ಕೆಡವಬೇಕಾಗುತ್ತದೆ ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ಬದಲಿಗೆ, ಮುಂದಾಲೋಚನೆ ಮಾಡಬೇಕಿತ್ತು. ಇದರಿಂದ, ಹಣ ಪೋಲಾಗುವುದನ್ನು ತ‍ಪ್ಪಿಸಬಹುದಿತ್ತು ಎನ್ನುವ ಅಭಿಪ್ರಾಯವೂ ಇದೆ.

ಶಾಸಕರು ಗಮನಹರಿಸಲಿ: ‘ಇಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಸೇರಿದಂತೆ ಹಲವು ನಾಯಕರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಅವಕಾಶವಿದೆ. ಆದರೆ, ಬಳಕೆಯಾಗದೆ ದೂಳು ತಿನ್ನುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎನ್ನುವುದು ದಲಿತ ಸಮಾಜದವರ ಅಸಮಾಧಾನವಾಗಿದೆ. ‘ಸಮಸ್ಯೆಗಳೇನಾದರೂ ಇದ್ದಲ್ಲಿ ಅದನ್ನು ಬಗೆಹರಿಸಬೇಕು. ಹೊಸ ಶಾಸಕ ಮಹೇಶ ಕುಮಠಳ್ಳಿ ಅವರಾದರೂ ಇತ್ತ ಗಮನಹರಿಸಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

‘ಭವನದಿಂದ ನಮ್ಮ ಸಮಾಜದವರಿಗೆ ಉಪಯೋಗವಾಗಿಲ್ಲ. ಇನ್ನಾದರೂ ರಾಜಕೀಯ ಮರೆಯಬೇಕು. ಶಾಸಕರು ಹಾಗೂ ಮುಂಬರುವ ಉಸ್ತುವಾರಿ ಸಚಿವರು ಸಚಿವರು ಚರ್ಚಿಸಿ ಕೂಡಲೇ ಭವನವನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ದಲಿತ ಮುಖಂಡ ಸಿದ್ದಾರ್ಥ ಸಿಂಗೆ ಒತ್ತಾಯಿಸಿದರು.

‘ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಹಿಂದಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಮಯ ನೀಡದ ಕಾರಣ ಉದ್ಘಾಟನಾ ಕಾರ್ಯಕ್ರಮ ಮುಂದೂಡುತ್ತಲೇ ಬಂದಿತ್ತು. ವಿಷಯವನ್ನು ನೂತನ ಶಾಸಕರ ಗಮನಕ್ಕೆ ತರಲಾಗುವುದು. ಈ ವರ್ಷವೇ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಬಿ.ಎಸ್. ಯಾದವಾಡ ಪ್ರತಿಕ್ರಿಯಿಸಿದರು.

ಪರಶುರಾಮ ನಂದೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.