ADVERTISEMENT

ಅಧಿಕಾರ ತ್ಯಜಿಸಲು ಕಲಬುರ್ಗಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 6:50 IST
Last Updated 11 ಜನವರಿ 2012, 6:50 IST

ಬೆಳಗಾವಿ: “ಬೆಳಗಾವಿಯ ಶಿರಸಂಗಿ ಲಿಂಗರಾಜ ಟ್ರಸ್ಟ್ ಹಾಗೂ ಧಾರವಾಡದ ಲಿಂಗಾಯತ ಶಿಕ್ಷಣ ಸಂಸ್ಥೆ ಇಂದು ಪ್ರಜ್ಞಾಹೀನ ಸ್ಥಿತಿಗೆ ತಲುಪಿವೆ. ಇದಕ್ಕೆ ಕಾರಣರಾದ ಆಡಳಿತಗಾರರು ಕೂಡಲೇ ಅಧಿಕಾರ ಬಿಟ್ಟು ಹೊರ ಬರಬೇಕು” ಎಂದು ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಸಲಹೆ ನೀಡಿದರು.

ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿರಸಂಗಿ ಲಿಂಗರಾಜ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

“ಶಿರಸಂಗಿ ಲಿಂಗರಾಜ ಟ್ರಸ್ಟ್ ಹಾಗೂ ಎಲ್‌ಇ ಸಂಸ್ಥೆಗೆ ಆರಂಭದಲ್ಲೇ ಅತಿಯಾದ ಆಸ್ತಿ ಲಭಿಸಿರುವುದೇ ಇಂದು ದುರವಸ್ಥೆಗೆ ತಲುಪಲು ಒಂದು ಮುಖ್ಯ ಕಾರಣವಾಗಿದೆ. ಮೂರು ವರ್ಷಗಳ ಹಿಂದೆಯೇ ಮುದ್ರಣಗೊಂಡ ಪುಸ್ತಕಗಳನ್ನು ಲಿಂಗರಾಜ ಟ್ರಸ್ಟ್ ಇನ್ನೂ ಬಿಡುಗಡೆ ಮಾಡಿಲ್ಲ. ಟ್ರಸ್ಟ್‌ನಲ್ಲಿ ನಡೆಯುತ್ತಿರುವ ಕೆಲಸಕ್ಕೆ ಇದೊಂದು ಸಣ್ಣ ನಿದರ್ಶನವಷ್ಟೇ” ಎಂದರು.

“ಶಿರಸಂಗಿ ಲಿಂಗರಾಜ ಟ್ರಸ್ಟ್ ಬೆಳೆಸಿದ್ದರೆ, ಇದೊಂದು ನೊಬೆಲ್, ಫೋರ್ಡ್‌ನಂತಹ ಸಂಸ್ಥೆಯಾಗಿರು ತ್ತಿತ್ತು.      ಜ್ಞಾನಪೀಠದಂತಹ ಅತ್ಯುನ್ನತ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿತ್ತು. ಆದರೆ, ಇಲ್ಲಿನ ಅಧಿಕಾರಿಗಳು ಕನಸು ಕಾಣುವುದನ್ನು ಬಿಟ್ಟು ಬರೀ ನಿದ್ರೆ ಮಾಡುತ್ತಿದ್ದಾರೆ” ಎಂದು ಕಲಬುರ್ಗಿ ಆಕ್ಷೇಪಿಸಿದರು.

“ಅಖಿಲ ಭಾರತ ವೀರಶೈವ ಮಹಾಸಭಾ ಜಗಳವಾಡುತ್ತ ಜೀವಂತವಾಗಿದೆಯೋ ಅಥವಾ ಜಗಳವಾಡುವ ಸಲುವಾಗಿಯೇ ಜೀವಂತವಾಗಿದೆಯೋ ತಿಳಿಯುತ್ತಿಲ್ಲ. ಯಾವಾಗ ಇದರ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಒಯ್ಯಲಾಯಿತೋ ಆಗಿನಿಂದಲೇ ಇದು ಜಗಳದ ಕೇಂದ್ರವಾಯಿತು” ಎಂದು ಅಭಿಪ್ರಾಯಪಟ್ಟರು.

ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಾಜಿ ಸಚಿವ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.