ADVERTISEMENT

ಅಧಿವೇಶನ ಸಿದ್ಧತೆ; ₹ 2 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 5:37 IST
Last Updated 5 ನವೆಂಬರ್ 2017, 5:37 IST
ಬೆಳಗಾವಿ ಸುವರ್ಣ ಸೌಧ
ಬೆಳಗಾವಿ ಸುವರ್ಣ ಸೌಧ   

ಬೆಳಗಾವಿ: ಇದೇ ತಿಂಗಳ 13ರಿಂದ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಸಾರಿಗೆ, ವಸತಿ ಇನ್ನಿತರ ತಯಾರಿಗಾಗಿ ಸರ್ಕಾರವು ಜಿಲ್ಲಾಡಳಿತಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಹೇಳಿದರು.

ಅಧಿವೇಶನವು ಹತ್ತು ದಿನಗಳ ಕಾಲ ನಡೆಯಲಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳಲು ಬರುವ ಶಾಸಕರು, ಸಚಿವರು, ಮಾಧ್ಯಮದವರು ಹಾಗೂ ಹಿರಿಯ ಅಧಿಕಾರಿಗಳಿಗಾಗಿ ವಸತಿ, ಊಟ, ಸಾರಿಗೆ ಸೇರಿದಂತೆ ಎಲ್ಲ ಅಗತ್ಯಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಶಾಸಕರು, ಸಚಿವರು, ಅಧಿಕಾರಿಗಳು, ಮಾಧ್ಯಮದವರು, ಪೊಲೀಸ್ ಅಧಿಕಾರಿಗಳು ಬೆಳಗಾವಿಗೆ ಆಗಮಿಸಲಿದ್ದಾರೆ. ಇವರ ವಸತಿಗಾಗಿ ಬೆಳಗಾವಿ ಸೇರಿದಂತೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿಯೂ ಹೋಟೆಲ್‌ಗಳನ್ನು ಬುಕ್‌ ಮಾಡಲಾಗಿದೆ. ಸುಮಾರು 1,600 ಕೊಠಡಿಗಳನ್ನು ಪಡೆಯಲಾಗಿದೆ ಎಂದರು.

ADVERTISEMENT

ಕಳೆದ ವರ್ಷ ಅಧಿವೇಶನಕ್ಕೆ ವಿವಿಧ ಇಲಾಖೆಗಳ ವಾಹನಗಳನ್ನು ಹೊರತು ಪಡಿಸಿ 100 ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿತ್ತು. ಅದರಂತೆ ಈ ವರ್ಷವೂ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗುವುದು. ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.

ಚಳಿಗಾಲ ಅಧಿವೇಶನ ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಸಾವಿರಾರೂ ಜನ ಪೊಲೀಸ್ ಸಿಬ್ಬಂದಿ ವಸತಿ, ಊಟ, ಕುಡಿಯುವ ನೀರು ಸೇರಿದಂತೆ ಯಾವುದೇ ಸೌಲಭ್ಯ ಕೊರತೆ ಉಂಟಾಗದಂತೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕಳೆದ ಬಾರಿ ಪೊಲೀಸ್ ಸಿಬ್ಬಂದಿಗೆ ಬಿಸಿ ನೀರು, ವಸತಿ ಸಮಸ್ಯೆ ಉಂಟಾಗಿತ್ತು. ಈ ಬಾರಿ ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

ಪ್ರತಿಭಟನೆ ವಿಶೇಷ ವ್ಯವಸ್ಥೆ: ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಅದಕ್ಕೆಂದೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಸುವರ್ಣ ವಿಧಾನಸೌಧದಿಂದ 2– 3 ಕಿ.ಮೀ ದೂರದಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದರು.
ವಿವಿಧೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇದರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಗರ ಪೊಲೀಸ್‌ ಆಯುಕ್ತರು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.