ADVERTISEMENT

ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ವೃತ್ತ

ಆರ್‌.ಎಲ್‌.ಚಿಕ್ಕಮಠ
Published 25 ಡಿಸೆಂಬರ್ 2017, 7:04 IST
Last Updated 25 ಡಿಸೆಂಬರ್ 2017, 7:04 IST
ತ್ಯವೂ ನಗರಕ್ಕೆ ಬರುವ ಕಾರ್ಮಿಕರು, ಉದ್ಯೋಗಸ್ಥರು, ರೈತರು ಇದೇ ವೃತ್ತದಿಂದ ಪ್ರವೇಶಿಸಬೇಕು. ವಾಹನಗಳ ದಟ್ಟನೆ ಹೆಚ್ಚಾಗಿದೆ. ಆದರೆ, ಇಲ್ಲಿ ಸಿಗ್ನಲ್‌ ದೀಪಗಳಿಲ್ಲ.
ತ್ಯವೂ ನಗರಕ್ಕೆ ಬರುವ ಕಾರ್ಮಿಕರು, ಉದ್ಯೋಗಸ್ಥರು, ರೈತರು ಇದೇ ವೃತ್ತದಿಂದ ಪ್ರವೇಶಿಸಬೇಕು. ವಾಹನಗಳ ದಟ್ಟನೆ ಹೆಚ್ಚಾಗಿದೆ. ಆದರೆ, ಇಲ್ಲಿ ಸಿಗ್ನಲ್‌ ದೀಪಗಳಿಲ್ಲ.   

ಬೆಳಗಾವಿ: ನಗರದ ಹೊರವಲಯದ ಅಲಾರವಾಡ ಬಳಿಯಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಿರುವ ವೃತ್ತವು ನಿತ್ಯ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳು ಇಲ್ಲದೇ ಇರುವುದರಿಂದ ವಾಹನಗಳ ಸುಗಮ ಸಂಚಾರ ಸವಾಲಾಗಿ ಪರಿಣಮಿಸಿದೆ.

ಹಲಗಾ ಬಸ್ತವಾಡ, ಸುವರ್ಣ ವಿಧಾನಸೌಧ, ಕೊಂಡಸಕೊಪ್ಪ, ತಾರಿಹಾಳ, ಮಾಸ್ತಮರಡಿ ಗ್ರಾಮಗಳಿಂದ ಬೆಳಗಾವಿಗೆ ಪ್ರವೇಶಿಸುವ ಹಾಗೂ ನಗರದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಹೋಗುವವರು ಈ ವೃತ್ತವನ್ನು ಬಳಸುತ್ತಾರೆ.

‘ಅಲಾರವಾಡ ಬಳಿ ಹೆದ್ದಾರಿ ಪಕ್ಕದ ಈ ವೃತ್ತದಲ್ಲಿ ರಸ್ತೆಉಬ್ಬು, ಟ್ರಾಫಿಕ್‌ ಸಿಗ್ನಲ್‌, ಹಗಲಿನಲ್ಲೂ ಸಿಗ್ನಲ್‌ ದೀಪಗಳು, ರಾತ್ರಿ ದೊಡ್ಡ ದೀಪಗಳು ಹಾಗೂ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪೊಲೀಸರನ್ನು ನಿಯೋಜಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಅಲ್ಲಿ ನಿತ್ಯ ಅಪಘಾತಗಳೂ ತಪ್ಪಿಲ್ಲ’ ಎಂದು ಅಲಾರವಾಡದ ನಾಗನಗೌಡ ಪಾಟೀಲ ತಿಳಿಸಿದರು.

ADVERTISEMENT

ಸಿಗ್ನಲ್‌ ದೀಪಗಳಿಲ್ಲ: ನಿತ್ಯವೂ ನಗರಕ್ಕೆ ಬರುವ ಕಾರ್ಮಿಕರು, ಉದ್ಯೋಗಸ್ಥರು, ರೈತರು ಇದೇ ವೃತ್ತದಿಂದ ಪ್ರವೇಶಿಸಬೇಕು. ವಾಹನಗಳ ದಟ್ಟನೆ ಹೆಚ್ಚಾಗಿದೆ. ಆದರೆ, ಇಲ್ಲಿ ಸಿಗ್ನಲ್‌ ದೀಪಗಳಿಲ್ಲ.

‘ಸರ್ಕಾರ ಇಲ್ಲಿ ದೊಡ್ಡ ಹೆದ್ದಾರಿ ಮಾಡಿದೆ. ಇದು ಅಕ್ಕಪಕ್ಕದಲ್ಲಿ ಇರುವವರನ್ನೇ ದೂರವಾಗಿಸಿದೆ. ನೂರು ಮೀಟರ್‌ ಸಮೀಪದಲ್ಲಿದ್ದರೂ ಈ ಕಡೆಯವರು ಆ ಕಡೆ, ಆ ಕಡೆಯವರು ಈ ಕಡೆಗೆ ಬರುವುದಕ್ಕೆ ಸುತ್ತಿಬಳಸಿ ಬರಬೇಕಾಗಿದೆ. ಇದರಿಂದ ತೊಂದರೆಯಾಗಿದೆ. ನಾಲ್ಕೂ ದಿಕ್ಕುಗಳಿಂದಲೂ ವಾಹನಗಳು ವೇಗವಾಗಿ ಬರುತ್ತವೆ. ಅಪಘಾತಗಳು ಸಂಭವಿಸುತ್ತಿವೆ’ ಎಂದು ಅಲಾರವಾಡದ ಕಲ್ಲಪ್ಪ ಸಂತಾಜಿ ತಿಳಿಸಿದರು.

‘ಹೆದ್ದಾರಿ ಪಕ್ಕದ ಸೇವಾ ರಸ್ತೆಯ ಅಲಾರವಾಡ ಬಳಿಯ ಅಂಡರ್‌ ಪಾಸ್‌ನಲ್ಲಿ ವೃತ್ತವು ಹಲವು ರಸ್ತೆಗಳನ್ನು ಕೂಡಿಸುತ್ತದೆ. ಪೂರ್ವದ ಅಲಾರವಾಡ, ದಕ್ಷಿಣದ ಹಲಗಾ, ಉತ್ತರದ ಗಾಂಧಿನಗರ, ಪಶ್ಚಿಮದ ಬಿ.ಎಸ್‌. ಯಡಿಯೂರಪ್ಪ ರಸ್ತೆ ಮೂಲಕ ಖಾಸಬಾಗದಿಂದ ಬರುವವರು ಈ ವೃತ್ತ ಸಂಪರ್ಕಿಸಲೇಬೇಕು.

ವಾಹನಗಳ ದಟ್ಟಣೆ ಹೆಚ್ಚಾಗಿದೆ. ಸುತ್ತಲೂ ಗದ್ದೆಗಳು ಇರುವುದರಿಂದ ರೈತರು, ಕಾರ್ಮಿಕರು ನಿತ್ಯ ಸಂಚರಿಸುತ್ತಾರೆ. ಆದರೆ ಈ ವೃತ್ತದಲ್ಲಿ ಮುನ್ನೆಚ್ಚರಿಕೆಗಳು ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ, ಅಪಘಾತಗಳು ಸಾಮಾನ್ಯವಾಗಿದೆ. ಅನೇಕ ಸಲ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಆಸಕ್ತಿ ವಹಿಸಿದ್ದರಿಂದ ರಸ್ತೆಗಳಿಗೆ ಉಬ್ಬು ಹಾಕಲಾಗಿದೆ. ಉಳಿದ ಬೇಡಿಕೆಗಳು ಹಾಗೆಯೇ ಉಳಿದಿವೆ’ ಎಂದು ವಕೀಲ ಅಣ್ಣಾಸಾಹೇಬ ಘೋರ್ಪಡೆ ಹೇಳಿದರು.

‘ಹೆದ್ದಾರಿ ನಿರ್ಮಾಣದ ನಂತರ ಹತ್ತು ವರ್ಷದಿಂದಲೂ ನೂರಾರು ಅಪಘಾತಗಳು ಸಂಭವಿಸಿವೆ. ಹಲವು ತೊಂದರೆಗೆ ಸಿಲುಕಿದ್ದಾರೆ. ಸಂಬಂಧಿಸಿದವರು, ಈ ವೃತ್ತದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತಾಗಲು ಕೂಡಲೇ ಕ್ರಮ ಕೈಗೊಳ್ಳಬೇಕು. ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

* * 

ವೇಗ ನಿಯಂತ್ರಣಕ್ಕೆ ಈಗ ರಸ್ತೆಯಲ್ಲಿ ರಸ್ತೆಉಬ್ಬುಗಳನ್ನು ಹಾಕಲಾಗಿದೆ. ಟ್ರಾಫಿಕ್‌ ಸಿಗ್ನಲ್‌, ಹೈಮಾಸ್ಟ್‌ ದೀಪ, ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
ಉದಯ ತಳವಾರ,
ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.