ADVERTISEMENT

ಆಮೆಗತಿಯಲ್ಲಿ ಬಸ್‌ ನಿಲ್ದಾಣ ಕಾಮಗಾರಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು; ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:32 IST
Last Updated 3 ಜೂನ್ 2018, 8:32 IST
ಬೆಳಗಾವಿಯ ಕೇಂದ್ರೀಯ ಬಸ್‌ ನಿಲ್ದಾಣದ ಕಾಮಗಾರಿಯನ್ನು ಶನಿವಾರ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಅವರು ವೀಕ್ಷಿಸಿದರು
ಬೆಳಗಾವಿಯ ಕೇಂದ್ರೀಯ ಬಸ್‌ ನಿಲ್ದಾಣದ ಕಾಮಗಾರಿಯನ್ನು ಶನಿವಾರ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಅವರು ವೀಕ್ಷಿಸಿದರು   

ಬೆಳಗಾವಿ: ‘ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದ ನಿರ್ಮಾಣ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವಿನ ಸಮನ್ವಯ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ಕಾಮಗಾರಿಯ ಪ್ರಗತಿ ಪರಿಶೀಲಿಸುತ್ತೇವೆ’ ಎಂದು ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ ಪಾಟೀಲ ಹೇಳಿದರು.

‘ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಗದಿಯಂತೆ ಶೇ 40ರಿಂದ 50ರಷ್ಟು ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಈಗಿನ ಸ್ಥಿತಿ ನೋಡಿದರೆ ಕೇವಲ ಶೇ 20 ರಿಂದ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಯ ಪಾಟೀಲ ಮಾತನಾಡಿ, ‘₹ 30 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 2016ರ ಡಿಸೆಂಬರ್‌ನಲ್ಲಿ ವರ್ಕ್‌ ಆರ್ಡರ್‌ ನೀಡಲಾಗಿತ್ತು. ಆದರೆ, ಗುತ್ತಿಗೆದಾರರಿಗೆ ಜಾಗವನ್ನು ಲೈನ್‌ಔಟ್‌ ಮಾಡಿ ಹಸ್ತಾಂತರಿಸಲಾಗಿತ್ತು. ಈ
ಎರಡು ತಿಂಗಳು ವಿಳಂಬವಾಗಲು ಏನು ಕಾರಣ? ಯಾವ ಅಧಿಕಾರಿಯಿಂದ ವಿಳಂಬವಾಗಿದೆ? ಅವರ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದೀರಾ?’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

‘ಎರಡು ತಿಂಗಳು ವಿಳಂಬವಾಗಿ ಕಾಮಗಾರಿ ಆರಂಭವಾಗುವುದರಿಂದ ಆರ್ಥಿಕವಾಗಿ ಉಂಟಾಗುವ ಹೊರೆಯನ್ನು ಯಾರು ಭರಿಸುತ್ತಾರೆ? ಸರ್ಕಾರಿ ಹಣ ಜನರ ತೆರಿಗೆಯ ಹಣವಾಗಿದ್ದು, ಇದು ಪೋಲಾಗಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಆದೇಶ ಪತ್ರಗಳಿಗೆ ತಡಕಾಡಿದ ಅಧಿಕಾರಿಗಳು: ‘ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆಯ ಅವಧಿಯು ುತ್ತಿಗೆ ಆದೇಶ ಪತ್ರ ನೀಡಿದ ದಿನದಿಂದ ಆರಂಭವಾಗುತ್ತದೆಯೋ? ಅಥವಾ ಜಾಗ ಒಪ್ಪಿಸಿದನಂತರ ಆರಂಭವಾಗುತ್ತದೆಯೋ?’ ಎಂದು ಅಭಯ ಪ್ರಶ್ನಿಸಿ, ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ಇದ್ದರೆ ತೋರಿಸಿ ಎಂದರು.

ಆದೇಶ ಪತ್ರಗಳನ್ನು ತೋರಿಸಲು ಅಧಿಕಾರಿಗಳು ತಡಕಾಡಿದರು. ಈ ವಿಳಂಬವಾಗಿರುವ ಕಾಮಗಾರಿಯನ್ನು ಮುಂದಿನ ಅವಧಿಯಲ್ಲಿ ಗುತ್ತಿಗೆದಾರರು ವೇಗವಾಗಿ ಮಾಡಿ ಮುಗಿಸುತ್ತಾರೆ ಎಂದು ಸಬೂಬು ಹೇಳಿದರು.

ದಂಡ ಹಾಕಿಲ್ಲವೇಕೆ?: ‘ಸರ್ಕಾರದ ಕಾಮಗಾರಿಗಳನ್ನು ಟೆಂಡರ್‌ ನೀಡುವಾಗ ಪ್ರತಿಯೊಂದು ಹಂತಕ್ಕೂ ಕಾಲಮಿತಿ ನಿಗದಿ ಮಾಡಲಾಗಿರುತ್ತದೆ. ಆ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಂತಹ ಗುತ್ತಿಗೆದಾರರಿಗೆ ದಂಡ ಹಾಕಲು ಅವಕಾಶ ಇರುತ್ತದೆ. ಈ ಕಾಮಗಾರಿಯನ್ನು ವಿಳಂಬ ಮಾಡಿರುವ ಗುತ್ತಿಗೆದಾರರ ಮೇಲೆ ಏಕೆ ದಂಡ ಹಾಕಿಲ್ಲ?’ ಎಂದು ಅಭಯ ಅಧಿಕಾರಿಗ
ಳನ್ನು ತರಾಟೆಗೆ ತೆಗೆದುಕೊಂಡರು.

‘ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಿದ್ದೇವೆ’ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು. ಕಾಮಗಾರಿಗೆ ತಂದ ಸಾಮಗ್ರಗಳನ್ನು ಥರ್ಡ್‌ ಪಾರ್ಟಿ ಪರೀಕ್ಷೆಗೆ ಒಳಪಡಿಸಿಲ್ಲ’ ಎಂದು ಅಭಯ ಆರೋಪಿಸಿದರು.

‘ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಹಾಗೂ ಕಾಮಗಾರಿಯನ್ನು ನಿಗದಿತ ಅವಧಿ 2019ರ
ನವೆಂಬರ್‌ ಒಳಗೆ ಪೂರ್ಣಗೊಳಿಸಬೇಕು. ಪ್ರತಿದಿನ ಸಾವಿರಾರು ಜನ ಪ್ರಯಾಣಿಕರು ಬಳಸುವ ಬಸ್‌ ನಿಲ್ದಾಣ ಆದಷ್ಟು ಬೇಗ ಸೇವೆಗೆ
ಲಭ್ಯವಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.