ADVERTISEMENT

ಆರನೇ ಸ್ಥಾನಕ್ಕೆ ಏರಿದ ಬೆಳಗಾವಿ ಜಿಲ್ಲೆ

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ l ಹತ್ತೊಂಬತ್ತು ಸ್ಥಾನ ಜಿಗಿತ

​ಪ್ರಜಾವಾಣಿ ವಾರ್ತೆ
Published 8 ಮೇ 2018, 8:51 IST
Last Updated 8 ಮೇ 2018, 8:51 IST

ಬೆಳಗಾವಿ: 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 3ನೇ ಸ್ಥಾನವನ್ನು ಉಳಿಸಿಕೊಂಡಿದೆ ಹಾಗೂ ಬೆಳಗಾವಿ ಜಿಲ್ಲೆ 25ರಿಂದ 6ನೇ ಸ್ಥಾನಕ್ಕೆ ಜಿಗಿದು ಉತ್ತಮ ಸಾಧನೆ ತೋರಿದೆ.

2016–17ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯು ಶೇ 71.2ರಷ್ಟು ಫಲಿತಾಂಶ ಗಳಿಸಿತ್ತು. ಈ ಬಾರಿ ಸುಧಾರಣೆಯಾಗಿದ್ದು, ಶೇ 84.77ರಷ್ಟು ಫಲಿತಾಂಶ ಪಡೆದಿದೆ. ಚಿಕ್ಕೋಡಿಯು ಶೇ 80.47ರಿಂದ ಶೇ 87.01ಕ್ಕೆ ಏರಿದೆ.

ಸೋಮವಾರ ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಆಯಾ ಕಾಲೇಜುಗಳಲ್ಲಿ ಲಭ್ಯವಾಗಲಿದೆ.

ADVERTISEMENT

ಬೆಳಗಾವಿಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 29,323 ವಿದ್ಯಾರ್ಥಿ (15,196), ವಿದ್ಯಾರ್ಥಿನಿಯರ (14,127) ಪೈಕಿ 24,851 ಮಂದಿ ತೇರ್ಗಡೆಯಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ತೋರಿದ್ದಾರೆ. ಫಲಿತಾಂಶದಲ್ಲಿ, ಈ ಸಾಲಿನಲ್ಲೂ ಬಾಲಕಿಯರ ಕೈ ಮೇಲಾಗಿದೆ.

‘ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಿಲ್ಲೆಯು ಒಳ್ಳೆಯ ಸ್ಥಾನ ಗಳಿಸಿದೆ. ಈ ಕೀರ್ತಿ ಅವರಿಗೇ ಸಲ್ಲಬೇಕು. ಅಧಿಕಾರಿಗಳೂ ಬೆಂಬಲ ನೀಡಿದ್ದರು. ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಯಾವುದೇ ಅಕ್ರಮವಿಲ್ಲದೆ ಪರೀಕ್ಷೆಗಳು ಮುಗಿದಿದ್ದವು. ಒಳ್ಳೆಯ ಫಲಿತಾಂಶ ದೊರೆತಿರುವುದು ಸಂತಸ ತಂದಿದೆ’ ಎಂದು ಡಿಡಿಪಿಐ ಕೆ.ಎಚ್‌. ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರೂ ತಂಡವಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಬಿಡಿಸುವ ತರಗತಿಗಳನ್ನು ನಡೆಸಲಾಗಿತ್ತು. ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಪ್ರಾಯೋಗಿಕ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿತ್ತು. ಇದರ ಪರಿಣಾಮ ಫಲಿತಾಂಶದಲ್ಲಿ ಕಾಣಿಸುತ್ತಿದೆ. ಜಿಲ್ಲೆಯನ್ನು 10ನೇ ಸ್ಥಾನದೊಳಗೆ ತರಬೇಕೆಂಬ ಕನಸು ನನಸಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಸದ್ಯದ ಮಾಹಿತಿ ಪ್ರಕಾರ, ಕ್ಯಾಂಪ್‌ನ ಸೇಂಟ್‌ ಕ್ಸೇವಿಯರ್‌ ಪ್ರೌಢಶಾಲೆಯ ಮೊಹಮ್ಮದ್‌ ಕೈಫ್‌ ಮುಲ್ಲಾ 625ಕ್ಕೆ 624 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ್ದಾರೆ.

ಅನುಶ್ರೀಗೆ ಶೇ 97.92: ಡಿವೈನ್‌ ಪ್ರಾವಿಡೆನ್ಸ್‌ ಪ್ರೌಢಶಾಲೆಯ ಅನುಶ್ರೀ ಆದಿತ್ಯ ಬಾಳಿಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 97.92ರಷ್ಟು ಅಂಕಗಳನ್ನು ಗಳಿಸಿ ಸಾಧನೆ ತೋರಿದ್ದಾರೆ.

ಇಂಗ್ಲಿಷ್‌ನಲ್ಲಿ 123, ಕನ್ನಡದಲ್ಲಿ 96, ಹಿಂದಿಯಲ್ಲಿ 99, ಗಣಿತವಿಜ್ಞಾನದಲ್ಲಿ 98, ವಿಜ್ಞಾನದಲ್ಲಿ 96 ಹಾಗೂ ಸಮಾಜವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

ಸಂತ ಜೋಸೆಫ್‌ ಕಾನ್ವೆಂಟ್‌ನ ಹರ್ಷಲ್‌ ದೀಪಕ್ ಸುಳೇಭಾವಿಕರ ಶೇ 98.4ರಷ್ಟು ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.