ADVERTISEMENT

ಆಹಾ! ಚಳಿಯ ಅಬ್ಬರ.. ಜನ ತತ್ತರ..

ಶ್ರೀಪಾದ ಯರೇಕುಪ್ಪಿ
Published 29 ಡಿಸೆಂಬರ್ 2014, 9:45 IST
Last Updated 29 ಡಿಸೆಂಬರ್ 2014, 9:45 IST
ಬೆಳಗಾವಿಯಲ್ಲಿ ನಸುಕಿನ ಜಾವ ಮಂಜು ಆವರಿಸಿರುವುದು
ಬೆಳಗಾವಿಯಲ್ಲಿ ನಸುಕಿನ ಜಾವ ಮಂಜು ಆವರಿಸಿರುವುದು   

ಬೆಳಗಾವಿ: ಚುಮುಚುಮು ಚಳಿ... ಆಗಷ್ಟೇ ಬೀಳಲು ಆರಂಭಿಸಿದ ಇಬ್ಬನಿ... ಬೆಳಿಗ್ಗೆ ಎಂಟಾದರೂ ಮುದುಡಿಕೊಂಡು ಬೆಚ್ಚಗೆ ಮಲಗಿಕೊಳ್ಳುವ ಜನ... ಸೂರ್ಯ ನೆತ್ತಿಯ ಮೇಲೆ ಬಂದರೂ ತೇಲಿ ಬರುತ್ತಿರುವ ಶೀತಗಾಳಿ... ಸಂಜೆಯಾಗುತ್ತಲೇ ಬೆಚ್ಚಗಿನ ಗೂಡು (ಮನೆ) ಸೇರಿಕೊಳ್ಳುವ ತವಕ..!

ಕಳೆದ ಒಂದು ವಾರದಿಂದ ಚಳಿರಾಯ ಅಬ್ಬರಿಸುತ್ತಿದ್ದಾನೆ. ಕುಂದಾನಗರಿಯ ಜನರಲ್ಲಿ ನಡುಕ ಹುಟ್ಟಿದೆ. ಬೆಳಿಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್‌ ಮಾಡಿ ಬೆವರು ಹರಿಸಲು ನಿತ್ಯ ಹೊರಡುತ್ತಿದ್ದವರು ಇನ್ನೂ ಸ್ವಲ್ಪ ಹೊತ್ತು ಹೋಗಲಿ ಎಂದು ಮಲಗಿಕೊಳ್ಳುತ್ತಿದ್ದಾರೆ. ಕಪಾಟಿನಲ್ಲಿ ಮುಡುಗಿ ಕುಳಿತಿದ್ದ ಬೆಚ್ಚನೆಯ ಉಡುಪುಗಳು ಹೊರಗೆ ಬೀಳುತ್ತಿವೆ. ವಾಕಿಂಗ್‌ಗೆ ಹೊರಡುವಾಗ ಸ್ವೆಟರ್‌– ಜಾಕೆಟ್‌, ಮಂಕಿ ಕ್ಯಾಪ್‌– ಮಫ್ಲರ್‌ಗಳನ್ನು ಸುತ್ತಿಕೊಂಡೇ ಮನೆಯಿಂದ ಹೊರಗೆ ಬೀಳುತ್ತಿದ್ದಾರೆ.

ಹಗಲಿನ ಹೊತ್ತು ತಣ್ಣನೆಯ ವಾತಾವರಣವಿದ್ದು, ಆಗಾಗ ತೇಲಿ ಬರುವ ತಂಗಾಳಿ ಕಚಗುಳಿ ಇಡುತ್ತಿದೆ. ಸಂಜೆಯಾಗುತ್ತಲೆ ಚಳಿರಾಯನ ಮಹಿಮೆ ಶುರುವಾಗುತ್ತಿರುವುದರಿಂದ ಬೇಗನೆ ಗೂಡು ಸೇರಿಕೊಳ್ಳಲು ತವಕಿಸುತ್ತಿದ್ದಾರೆ. ರಾತ್ರಿಯ ಹೊತ್ತು ಬೈಕ್‌ ಹೊಡೆಯುವ ಸವಾರರು ಗಡ ಗಡ ನಡುಗುತ್ತ ಸಂಚರಿಸುವಂತಾಗಿದೆ.

ನವೆಂಬರ್‌ 27ರಂದು 11.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಆದ ಬಳಿಕ ಮತ್ತೆ ಬಿಸಿಲಿನ ತಾಪ ಹೆಚ್ಚಾಗಿತ್ತು. ಆದರೆ, ಡಿಸೆಂಬರ್‌ 20ರಿಂದ ನಗರದಲ್ಲಿ ಮತ್ತೆ ಉಷ್ಣಾಂಶವು ಇಳಿಮುಖವಾಗುತ್ತಿದೆ. 22 ರಂದು 9.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಈವರೆಗಿನ ದಾಖಲೆ.

ಕಳೆದ ವರ್ಷ ನವೆಂಬರ್‌ 21 ರಂದು 9.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. 2012ರ ನವೆಂಬರ್‌ 8ರಂದು 7.7 ಡಿಗ್ರಿ ಸೆಲ್ಸಿಯಸ್‌, ಡಿಸೆಂಬರ್‌ 26ರಂದು 8.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. 2011ರ ಜನವರಿ 16ರಂದು 7.2 ಕನಿಷ್ಠ ಉಷ್ಣಾಂಶ ವರದಿಯಾಗಿತ್ತು. 1994ರ ಡಿಸೆಂಬರ್‌ 23ರಂದು ದಾಖಲಾದ 6.5 ಡಿಗ್ರಿ ಸೆಲ್ಸಿಯಸ್‌ ಇದುವರೆಗಿನ ಕನಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಸ್ವೆಟರ್‌, ಜಾಕೆಟ್‌ಗೆ ಹೆಚ್ಚಿದ ಬೇಡಿಕೆ
 ಚಳಿ ಕಾಣಿಸಿಕೊಂಡಿದ್ದರಿಂದ ಸ್ವೆಟರ್‌, ಜಾಕೆಟ್‌ನಂತಹ ಬೆಚ್ಚಗಿನ ಉಡುಪನ್ನು ಖರೀದಿಸಲು ಅಂಗಡಿಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ. ನಗರದ ಕಡೋಲ್ಕರ್‌ ಗಲ್ಲಿಯಲ್ಲಿನ ಟಿಬೇಟಿಯನ್‌ರ ಅಂಗಡಿ ಎದುರು ಸ್ವೆಟರ್‌, ಜಾಕೆಟ್‌ ಖರೀದಿಗಾಗಿ ನಿತ್ಯ ಜನಜಂಗುಳಿ ಕಾಣುತ್ತಿದೆ. ನಗರದ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ.
‘ಕಳೆದ ವರ್ಷ ನವೆಂಬರ್‌ ತಿಂಗಳಿನಿಂದಲೇ ಚಳಿ ಬೀಳಲು ಆರಂಭವಾಗಿತ್ತು. ಈ ಬಾರಿ ಕಳೆದ ಒಂದು ವಾರದಿಂದ ಚಳಿ ಬೀಳುತ್ತಿರುವುದರಿಂದ ಸ್ವೆಟರ್‌, ಜಾಕೆಟ್‌ ಹುಡ್‌, ಹ್ಯಾಂಡ್‌ ಗ್ಲೌಸ್‌, ಮಂಕಿ ಕ್ಯಾಪ್‌ಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಬೇಡಿಕೆ ಹೆಚ್ಚಾಗಿದೆ’ ಎನ್ನುತ್ತಾರೆ ಖಡೆಬಜಾರ್‌ನ ವ್ಯಾಪಾರಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.