ADVERTISEMENT

ಉದಪುಡಿಯಲ್ಲಿ ಶಿವಸಾಗರ ಶುಗರ್ಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:35 IST
Last Updated 17 ಅಕ್ಟೋಬರ್ 2011, 10:35 IST
ಉದಪುಡಿಯಲ್ಲಿ ಶಿವಸಾಗರ ಶುಗರ್ಸ್‌ ಆರಂಭ
ಉದಪುಡಿಯಲ್ಲಿ ಶಿವಸಾಗರ ಶುಗರ್ಸ್‌ ಆರಂಭ   

ರಾಮದುರ್ಗ: ಸಾಕಷ್ಟು ಬಡತನದಲ್ಲಿರುವ ರೈತರು ನೀಡಿದ ಷೇರು ಹಣದಲ್ಲಿ ಕಾರ್ಖಾನೆ ನಿರ್ಮಾಣವಾಗಿದೆ. ಹಣವನ್ನು ವಿವಿಧ ಕ್ಷೇತ್ರಗಳಲ್ಲಿ ವಿನಿಯೋಗಿಸಿ ಷೇರುದಾರರಿಗೆ ಹೆಚ್ಚಿನ ಲಾಭಾಂಶ ನೀಡಲಾಗುವುದು ಎಂದು ಶ್ರೀ ಶಿವಸಾಗರ ಶುಗರ ಮತ್ತು ಆಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್‌ನ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.

ರಾಮದುರ್ಗ ತಾಲ್ಲೂಕಿನ ಉದಪುಡಿಯಲ್ಲಿ ನಿರ್ಮಾಣಗೊಂಡಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯ ಉದ್ಘಾಟನೆ ಮತ್ತು ಪ್ರಥಮ ಕಬ್ಬು ನುರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಡಳಿತ ಮಂಡಳಿಯ ಲಾಭಕ್ಕಿಂತಲೂ ರೈತರ ಕಬ್ಬಿಗೆ ಉತ್ತಮ ದರ ನೀಡಲು ಪ್ರಾಶಸ್ತ್ಯ ನೀಡಲಾಗುವುದು ಎಂದು ನುಡಿದರು.

ಪ್ರಾಮಾಣಿಕ ಪ್ರಯತ್ನದಿಂದ ಯಾವುದೇ ಕಾರ್ಯಗಳಿಗೆ ಅಡೆತಡೆಗಳು ಎದುರಾಗುವುದಿಲ್ಲ. ಪ್ರತಿಯೊಬ್ಬರ ಪ್ರಾಮಾಣಿಕತೆಯ ಹಿಂದೆ ಯಶಸ್ಸು ಇರುತ್ತದೆ ಎನ್ನುವುದಕ್ಕೆ ಬರ ಪೀಡಿತ ಪ್ರದೇಶ ಉದಪುಡಿಯಲ್ಲಿ ಕೇವಲ ಎರಡೇ ವರ್ಷದಲ್ಲಿ ಈ ಕಾರ್ಖಾನೆ ಕಾರ್ಯಾರಂಭಗೊಂಡಿರುವುದೇ ನಿದರ್ಶನ ಎಂದು ಅವರು ತಿಳಿಸಿದರು.

ಕತ್ತಲಲ್ಲಿ ಮೊಂಬತ್ತಿಯ ಬೆಳಕಿನಂತೆ ಪ್ರಗತಿ ಹೊಂದಿರುವ ಸ್ಥಳಗಳಲ್ಲಿಯೇ ಉದ್ಯಿಮೆಗಳನ್ನು ಸಾಧಿಸಿದರೆ ಸಾಲದು. ಪ್ರಗತಿ ಹೊಂದಿರದ ಸ್ಥಳಗಳಲ್ಲಿ ಉದ್ಯಿಮೆ ಸ್ಥಾಪಿಸುವುದರಿಂದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಸಾಧ್ಯ. ಗಡಿ ಅಂಚಿನ ರೈತರು ಮಹಾರಾಷ್ಟ್ರಕ್ಕೆ ಕಬ್ಬು ಸಾಗಿಸಲು ಪಟ್ಟಿರುವ ಕಷ್ಟವನ್ನು ಕಡಿಮೆಗೊಳಿಸುವ ಸಲುವಾಗಿ ಈ ಕಾರ್ಖಾನೆ ಸ್ಥಾಪಿಸಲಾಗಿದೆ ಎಂದು ನುಡಿದರು.

ಬರ ಪೀಡಿತ ಉದಪುಡಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ವೀರಭದ್ರೇಶ್ವರ ಮತ್ತು ಬದ್ನಿ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ರಾಜ್ಯ ನಾಯಕರ ಮನವೊಲಿಸಿ ಈ ಪ್ರದೇಶವನ್ನು ನೀರಾವರಿಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಶಾಸಕ, ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.

ಕಬ್ಬು ಇರುವ ಕಡೆಗಳಲ್ಲಿ ಕಾರ್ಖಾನೆ ಸ್ಥಾಪಿಸುವುದು ರೂಡಿ. ಆದರೆ ಶಿವಸಾಗರ ಬಳಗವು ಈ ಭಾಗದಲ್ಲಿ ಕಾರ್ಖಾನೆ ಸ್ಥಾಪಿಸಿರುವುದು ಶ್ಲಾಘನೀಯ. ಅಂತೆಯೇ ರೈತರ ಕಬ್ಬು ಕಟಾವಿಗೆ ತೊಂದರೆ ಎದುರಾಗದಂತೆ ಜಾಗೃತಿ ವಹಿಸಬೇಕೆಂದು ಜೊಲ್ಲೆ ಉದ್ಯೋಗ ಸಮೂಹದ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸಲಹೆ ನೀಡಿದರು.

ರೈತ ದೇಶದ ಬೆನ್ನೆಲುಬು ಎನ್ನುವ ಉಕ್ತಿ ಇದೆ. ಆದರೆ ರೈತನ ಬೆನ್ನೆಲುಬಾಗಿ ಕಾರ್ಖಾನೆ ಸ್ಥಾಪಿಸಲು ಆಡಳಿತ ಮಂಡಳಿ ನಿರ್ಧರಿಸಿ ಈ ಭಾಗದಲ್ಲಿ ಕಾರ್ಖಾನೆ ಆರಂಭಿಸಲಾಗಿದೆ. ರೈತರು ಕಾರ್ಖಾನೆಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕೆಂದು ನಿರ್ದೇಶಕ ಆನಂದ ಕುಲಕರ್ಣಿ ಕೋರಿದರು.

ತೊರಗಲ್ ಮಠದ ಚನ್ನಮಲ್ಲ ಶಿವಾಚಾರ್ಯರು, ಪಂಢರಪುರದ ಗುರುವರ್ಯ ಶರದಹರಿಬಾಹು ಲಾಖಿ, ಕೊಲ್ಲಾಪುರ ದೇವಟಾನಮಠದ ಬಾಲಕೃಷ್ಣ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಡಾ. ಜಿ.ಆರ್. ಸೂರ್ಯವಂಶಿ ಸ್ವಾಗತಿಸಿದರು. ಸಾವಿತ್ರಿದೇವಿ ಗದಿಗೆಪ್ಪನವರ, ಡಾ. ಮೈತ್ರಾಯಿಣಿ ಗದಿಗೆಪ್ಪನವರ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.