ಬೆಳಗಾವಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕವಾಗಿ ಬ್ಯಾಂಕುಗಳಲ್ಲಿ ಆರಂಭಿಸಿರುವ ಖಾತೆಗಳಲ್ಲಿನ ವ್ಯವಹಾರಗಳ ಬಗ್ಗೆ ಪ್ರತಿದಿನ ಸರಿಯಾದ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ನಿರೀಕ್ಷಕ ತಮೀಝ ವೆಂಡನ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹಳೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬ್ಯಾಂಕ್ ಅಧಿಕಾರಿಗಳ ಹಾಗೂ ಉಪ ವೆಚ್ಚ ನಿರೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಉಮೇದುವಾರರು ನ್ಯಾಯ ಸಮ್ಮತವಾಗಿ ಚುನಾವಣಾ ವೆಚ್ಚವನ್ನು ನಿರ್ವಹಿಸುವುದರ ಬಗ್ಗೆ ನಿಗಾವಹಿಸಲು ಚುನಾವಣೆಗಾಗಿಯೇ ಬೇರೊಂದು ಖಾತೆಯನ್ನು ತೆರೆಯಲು ಆದೇಶ ಹೊರಡಿಸಿದೆ. ಈ ಖಾತೆಯಿಂದ ನಡೆಯುವ ಎಲ್ಲ ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಬ್ಯಾಂಕ್ ಅಧಿಕಾರಿಗಳ ಮೇಲಿದೆ ಎಂದರು.
ಏಕ ಕಾಲಕ್ಕೆ ₨ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಮೇದುವಾರರು ಅಥವಾ ರಾಜಕೀಯ ಪಕ್ಷಗಳು ತಮ್ಮ ಖಾತೆಯಿಂದ ಪಡೆದರೆ ಈ ಖಾತೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಉಪ ವೆಚ್ಚ ನಿರೀಕ್ಷಕರಿಗೆ ಮಾಹಿತಿ ಕಳಿಸಿಕೊಡಬೇಕು. ಚುನಾವಣಾ ಆಯೋಗದ ಆಶಯಗಳನ್ನು ಎಲ್ಲರೂ ಅರ್ಥಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಉಮೇದುವಾರರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಸಂಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಜಿ.ಎಲ್. ಪ್ರವೀಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕ ಹೊಸಮಠ ಸ್ವಾಗತಿಸಿದರು. ಉಪ ವೆಚ್ಚ ನಿರೀಕ್ಷಕ ರವೀಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.