ಖಾನಾಪುರ: ಮಲಪ್ರಭೆಯ ಉಗಮಸ್ಥಾನ ಮತ್ತು ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ ಒಂದೇ ದಿನ 21 ಸೆಂ.ಮೀ ಮಳೆ ಸುರಿದು ತಾಲ್ಲೂಕಿನಲ್ಲೇ ಅಧಿಕ ಮಳೆ ಸುರಿದ ದಾಖಲೆ ನಿರ್ಮಿಸಿದೆ.
ಕಣಕುಂಬಿ ಮಟ್ಟಿಗೆ ಶ್ರಾವಣ ಮಾಸದ ಆರಂಭ ರುದ್ರ ರಮಣೀಯವಾಗಿದ್ದು, ಗ್ರಾಮದ ಸುತ್ತಮುತ್ತ ಆ.1ರಂದು 4 ಸೆಂ.ಮೀ, 2 ರಂದು 13.7 ಸೆಂ.ಮೀ, 3 ರಂದು 4.5 ಸೆಂ.ಮೀ ಮತ್ತು 4 ರಂದು ದಾಖಲೆಯ 21.4 ಸೆಂ.ಮೀ ಮಳೆಯಾದ ದಾಖಲೆ ಇದೆ.
ಕಳೆದ ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಅವ್ಯಾಹತ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅರಣ್ಯ ಪ್ರದೇಶದ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದಲ್ಲಿ ಮರಗಿಡಗಳು ಉರುಳಿ ಬಿದ್ದ ಕಾರಣ ವಿದ್ಯುತ್ ಸರಬರಾಜಿಗೆ ಅಡಚಣೆ ಉಂಟಾಗಿ ಕಣಕುಂಬಿ, ಜಾಂಬೋಟಿ, ಗುಂಜಿ, ಹೆಮ್ಮಡಗಾ, ನಿಲಾವಡೆ, ಬೈಲೂರು, ಲೋಂಡಾ ಅರಣ್ಯದ 50ಕ್ಕೂ ಹೆಚ್ಚು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.
ಸತತ ನಾಲ್ಕನೇ ದಿನವೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪಾಂಡರಿ, ಮಹಾದಾಯಿ ಹಾಗೂ ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ಹೆಮ್ಮಡಗಾ, ಭೀಮಗಡ, ನೀಲಾವಡೆ, ಗವ್ವಾಳಿ, ಶಿರೋಲಿ, ನೇರಸಾ, ಗುಂಜಿ, ಕಣಕುಂಬಿ, ಚಾಪೋಲಿ, ಜಾಮಗಾಂವ, ಅಮಗಾಂವ, ಕಬನಾಳಿ, ಮಳವ, ದೇಗಾಂವ,
ಜಾಂಬೋಟಿ, ಭೀಮಗಡ ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಳಸಾ, ಬಂಡೂರಿ, ಕುಂಬಾರ, ಅಲಾತ್ರಿ, ಮುಂಗೇತ್ರಿ, ನಿಟ್ಟೂರ, ಪಣಸೂರಿ ಹಳ್ಳಕೊಳ್ಳಗಳೂ ಸಹ ತುಂಬಿ ಹರಿಯುತ್ತಿವೆ.
ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ತಾಲ್ಲೂಕಿನ ಶಿರೋಲಿ ಹಾಗೂ ಮಾಂಗೇನಹಾಳ, ನೇರಸಾ ಹಾಗೂ ಕೊಂಗಳಾ, ಲೋಂಡಾ ಹಾಗೂ ಮಾಚಾಳಿ, ಕೌಲಾಪುರವಾಡಾ ಹಾಗೂ ಮೋದೆಕೊಪ್ಪ ತೋರಾಳಿ, ಗೊಲ್ಯಾಳಿ ಹಾಗೂ ದೇವಾಚಿಹಟ್ಟಿ ನಡುವಿನ ಸಂಪರ್ಕ ಸೇತುವೆಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕೋಡಿ ವರದಿ
ಮಹಾರಾಷ್ಟ್ರದ ಘಟ್ಟ ಪ್ರದೇಶದ ನದಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಹಿರಿಹೊಳೆ ಕೃಷ್ಣಾ ಮತ್ತು ಉಪನದಿಗಳು ಒಡಲು ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನಲ್ಲಿ ಕೆಳಮಟ್ಟದ ಆರು ಸೇತುವೆಗಳು ಜಲಾವೃತಗೊಂಡಿವೆ.
ಇದರಿಂದಾಗಿ ಜನರು ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲ್ಲೂಕಿನಲ್ಲಿ ಗುರುವಾರ ದೂಧಗಂಗಾ ನದಿಗೆ 17, 776 ಕ್ಯುಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1.00775 ಕ್ಯುಸೆಕ್ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ ಒಟ್ಟು 1.18,5521 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಕೃಷ್ಣಾ ನದಿಗೆ ಇರುವ ಕಲ್ಲೋಳ–ಯಡೂರ, ದೂಧಗಂಗಾ ನದಿಯ ಮಲಿಕವಾಡ–ದತ್ತವಾಡ, ಕಾರದಗಾ–ಭೋಜ ಮತ್ತು ವೇದಗಂಗಾ ನದಿಗೆ ಇರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ ಮತ್ತು ಭೋಜವಾಡಿ–ಕುನ್ನೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಮುಳುಗಿದ್ದು ಹತ್ತಾರು ಕಿ.ಮಿ ಸುತ್ತುಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗುರುವಾರ ಬೆಳಿಗ್ಗೆಯಿಂದ ಮಳೆ ಸಾಧಾರಣವಾಗಿ ಸುರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.