ADVERTISEMENT

ಕಗದಾಳದಲ್ಲಿ ರೈತರಿಂದ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 8:40 IST
Last Updated 26 ಫೆಬ್ರುವರಿ 2011, 8:40 IST

ಸವದತ್ತಿ: ಸದ್ಯ ಕಾಲುವೆಯಲ್ಲಿ ನೀರು ಬೇಕಾಬಿಟ್ಟಿಯಾಗಿ ಹರಿಯುತ್ತಿದೆ. ಹಳ್ಳದಲ್ಲಿ ನೀರು ಹರಿಯುವುದು ನಿಂತ ನಂತರವೇ ಕಾಮಗಾರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಶುಕ್ರವಾರ ರಸ್ತೆ ತಡೆ ನಡೆಸಿದರು.ಮಾರ್ಚ್‌ನಲ್ಲಿ ಕಾಲುವೆ ಬಂದ್ ಮಾಡಿದ ನಂತರ ಕಾಮಗಾರಿ ಪುನಾರಂಭಿಸಿದಲ್ಲಿ ಕಾಮಗಾರಿಯ ಗುಣಮಟ್ಟವೂ ಸರಿಯಾಗಬಹುದು. ಹರಿಯುವ ನೀರಲ್ಲೇ ಕಾಮಗಾರಿ ಮುಂದುವರಿಸುವುದು ಬೇಡ ಎಂದು ರೈತರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ರೈತರು ಎಷ್ಟೇ ಮನವರಿಕೆ ಮಾಡಿದರೂ ಅವರು ಅದಕ್ಕೆ ಒಪ್ಪಲಿಲ್ಲ.  ಮಲಪ್ರಭಾ ಬಲದಂಡೆ ಯೋಜನೆಯ ವೃತ್ತ ಎಂಜಿನಿಯರ್ ಪದ್ಮನಾಭ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.  ನೀರು, ರಾಡಿ ಎಂದು ಸುಮ್ಮನೆ ಕೊಡಕ್ಕಾಗದು.  ಈಗ ಕೆಲಸ ಮುಂದುವರಿಸುತ್ತವೆ ಎಂದು ಕೆಲವು ತಾಂತ್ರಿಕ ಕಾರಣಗಳನ್ನು ನೀಡಿದರು.

ಮಾಜಿ ಶಾಸಕ ಆರ್.ವಿ. ಪಾಟೀಲ ಮಾತನಾಡಿ, ಕಾಮಗಾರಿಯ ನೀಲನಕ್ಷೆ ತೋರಿಸಿ, ಈ ಕೆಲಸವನ್ನು ಕೊನೆಯ ಭಾಗದಿಂದ ಮಾಡಿದಾಗ ಮಾತ್ರ ನೀರು ಸಲೀಸಾಗಿ ಹರಿಯಲು ಸಾಧ್ಯ. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಕೈಗೊಳ್ಳದಿದ್ದಲ್ಲಿ ನೀರು ಇಲ್ಲಿಯೆ ನಿಂತು ಭೂಮಿ ಜವುಳು ಆಗಲಿದೆ. ಇದರಿಂದ ರೈತರೂ ತೊಂದರೆ ಅನುಭವಿಸಲಿದ್ದಾರೆ ಎಂದರು.ಕಾಡಾ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರೂ ಪ್ರಯೋಜನವಾಗಲಿಲ್ಲ.

ಪ್ರತಿಭಟನೆಯಲ್ಲಿ  ಗ್ರಾ.ಪಂ. ಅಧ್ಯಕ್ಷ ಗುರುನಾಥ ಜೋತೆನ್ನವರ, ಆರ್.ಎಫ್. ಮಾಡೊಳಿ, ರಾಮಪ್ಪ ಜೋತೆನ್ನವರ, ಸೋಮರಡ್ಡಿ ನಿಂಗರಡ್ಡಿ, ಸೈದುಸಾಬ ನದಾಫ, ನಾಗಪ್ಪ ಸುರಕೊಡ, ವಿ.ಪಿ. ಕುಲಕರ್ಣಿ, ಕಳಸಾ-ಬಂಡೂರಿ ಹೊರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ರಾಮಕೃಷ್ಣ ಸವದತ್ತಿ ಹಾಗೂ ನೂರಾರರು ರೈತರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಐ. ಕಾಜಗಾರ, ಪಿ.ಐ. ಹೊಸಮನಿ  ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.