ADVERTISEMENT

ಕಡ್ಡಾಯ ಮತದಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 10:06 IST
Last Updated 28 ಮಾರ್ಚ್ 2018, 10:06 IST

ಹಾರೂಗೇರಿ: ‘ಮತದಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರೂ ಅರಿತು ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ಡಾ. ಪಿ.ಬಿ.ನರಗುಂದ ಹೇಳಿದರು.

ಯಲ್ಪಾರಟ್ಟಿ ಗ್ರಾಮದಲ್ಲಿ ಹಾರೂಗೇರಿಯ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್. ಶಿಬಿರದಲ್ಲಿ ’ಮತದಾನ ಜಾಗೃತಿ ಮತ್ತು ಯುವಕರ ಪಾತ್ರ’ ಕುರಿತು ಅವರು ಉಪನ್ಯಾಸ ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಾಗೂ ನಮ್ಮ ನಾಯಕರನ್ನು ನಾವು ಆರಿಸಿಕೊಳ್ಳುವ ಅಧಿಕಾರಕ್ಕೆ ಮಹತ್ವ ಇದೆ. ಅದನ್ನು ಎಲ್ಲರೂ ಅರಿಯಬೇಕು. ಮತದ ಮಹತ್ವ ತಿಳಿಯದಿದ್ದರೆ ಚುನಾವಣೆ ವ್ಯರ್ಥವಾಗುತ್ತದೆ’ ಎಂದರು.

ADVERTISEMENT

‘ದೇಶದಲ್ಲಿ ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಅದು ಯಾರ ಆಧೀನದಲ್ಲಿಯೂ ಕಾರ್ಯ ನಿರ್ವಹಿಸುವುದಿಲ್ಲ. ಸ್ವತಂತ್ರ ಹಾಗೂ ನ್ಯಾಯ ಸಮ್ಮತ  ಅಧಿಕಾರ ಹೊಂದಿದೆ’ ಎಂದರು.

‘ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಹಣ, ಹೆಂಡ, ಕಾಣಿಕೆ ವಸ್ತುಗಳಿಗೆ ಮಾರಾಟವಾಗಬಾರದು. ರಾಷ್ಟ್ರದ ಹಿತ, ಸ್ಥಿರ ರಾಜಕೀಯ ವ್ಯವಸ್ಥೆ, ಹಾಗೂ ಸುಭದ್ರ ಸರ್ಕಾರದ ರಚನೆಗಾಗಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದರು.

ಪ್ರಕಾಶ ನೇಗಿನಾಳ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ಗ್ರಾಮದ ಪ್ರಾಥಮಿಕ ಶಾಲಾ ಆವರಣ ಹಾಗೂ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಿದರು.

ಶಿಬಿರಾಧಿಕಾರಿ ಪ್ರೊ.ಡಿ.ಬಿ. ಕಲಚಿಮ್ಮಡ, ಉಪನ್ಯಾಸಕರಾದ ಎ.ವಿ. ಮೆಂಡಿಗೇರಿ, ಜಿ.ಆರ್. ಗುಡೋಡಗಿ, ಪರಶುರಾಮ ಗುಡೋಡಗಿ, ಪ್ರಶಾಂತ ಜಂಬಗಿ, ಸಾಗರ ಜಂಬಗಿ ಇದ್ದರು. ಜಗದೀಶ ಕಾಂಬಳೆ ಸ್ವಾಗತಿಸಿದರು. ಶ್ರೀಧರ ಹಳ್ಳೂರ ನಿರೂಪಿಸಿದರು. ದಯಾನಂದ ಬಿರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.