ADVERTISEMENT

ಕಣಕ್ಕಿಳಿಯಲು ಹುಕ್ಕೇರಿ ಹಿಂದೇಟು

ಚಿಕ್ಕೋಡಿ ಅಭ್ಯರ್ಥಿ ಬದಲಾವಣೆಗೆ ಕಾಂಗ್ರೆಸ್ ಯೋಚನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 8:56 IST
Last Updated 17 ಮಾರ್ಚ್ 2014, 8:56 IST
ಕಣಕ್ಕಿಳಿಯಲು ಹುಕ್ಕೇರಿ ಹಿಂದೇಟು
ಕಣಕ್ಕಿಳಿಯಲು ಹುಕ್ಕೇರಿ ಹಿಂದೇಟು   

ಬೆಂಗಳೂರು: ಚಿಕ್ಕೋಡಿ ಲೋಕಸಭಾ ಕ್ಷೇತ್ರ­ದಿಂದ ಕಣಕ್ಕಿಳಿಯಲು ಸಕ್ಕರೆ ಸಚಿವ ಪ್ರಕಾಶ್‌ ಹುಕ್ಕೇರಿ ಹಿಂದೇಟು ಹಾಕುತ್ತಿರು­ವುದರಿಂದ ಬದಲಿ ಅಭ್ಯರ್ಥಿಯನ್ನು ಹುಡುಕಲು ಕಾಂಗ್ರೆಸ್‌ ಯೋಚಿಸುತ್ತಿದೆ. ರಾಜ್ಯ ಕಾಂಗ್ರೆಸ್‌ ನಾಯಕರು ಈ ಕುರಿತು ಚರ್ಚೆಯನ್ನೂ ಆರಂಭಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ‘ಹುಕ್ಕೇರಿ ಅವರು ಲೋಕಸಭಾ ಚುನಾ­ವಣೆ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಬಗ್ಗೆ ಯೋಚಿಸ­ಲಾಗುತ್ತಿದೆ. ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ­ರನ್ನು ಭೇಟಿ­ಮಾಡಿದ ಸಂದರ್ಭದಲ್ಲಿ ಈ ಕುರಿತು ಚರ್ಚಿಸಿ­ದ್ದೇನೆ. ಬದಲಿ ಅಭ್ಯರ್ಥಿಗೆ ಹುಡುಕಾಟ ನಡೆದಿದೆ’ ಎಂದರು.

ಆ ಭಾಗದ ಕಾಂಗ್ರೆಸ್‌ನ ಪ್ರಮುಖ ಮುಖಂಡರಲ್ಲಿ ಒಬ್ಬ­ರಾಗಿದ್ದ ಶಂಕರಾನಂದ ಅವರ ಪುತ್ರ ಓಂಪ್ರಕಾಶ್‌ ಕಣಗಲಿ, ಮಾಜಿ ಶಾಸಕ ಎ.ಬಿ.ಪಾಟೀಲ, ಪ್ರಕಾಶ್‌ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ, ಬಿಜೆಪಿಯ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ಪುತ್ರ ಅಮಿತ್‌ ಕೋರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌­ಗಾಗಿ ಪೈಪೋಟಿಯಲ್ಲಿದ್ದಾರೆ.

ಮನವೊಲಿಕೆ ಮುಂದುವರಿಕೆ: ಈ ಮಧ್ಯೆ ಪ್ರಕಾಶ್‌ ಹುಕ್ಕೇರಿ ಅವ­ರನ್ನೇ ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ­ಯವರು ಆಸಕ್ತಿ ತೋರಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಹೆಸರು ಪ್ರಕಟಿ­ಸಿದ ನಂತರ ಅಭ್ಯರ್ಥಿ ಬದಲಾವಣೆ ಮಾಡುವುದು ಸಮಂಜಸ­ವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ಅವರು ಹುಕ್ಕೇರಿ ಅವರೊಂದಿಗೆ ದೂರವಾಣಿ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ.  ಚುನಾವಣೆ­ಯಲ್ಲಿ ಸ್ಪರ್ಧಿಸು­ವಂತೆ ಸಚಿವರ ಮನವೊಲಿಸಲು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್‌ಗೆ ಮಾಹಿತಿ: ಶಿವಮೊಗ್ಗ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ­ಗಳನ್ನು ಬದಲಾವಣೆ ಮಾಡು­ವಂತೆ ಸ್ಥಳೀಯ ಮುಖಂಡರು, ಕಾರ್ಯ­ಕರ್ತರು ಒತ್ತಡ ಹೇರುತ್ತಿರುವ ಮಾಹಿತಿಯನ್ನು ಎಐಸಿಸಿ ವರಿಷ್ಠರಿಗೆ ತಲುಪಿಸಲು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ.
ಭೇಟಿಯ ವೇಳೆ ಈ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಎರಡೂ ಕ್ಷೇತ್ರಗಳ ಮುಖಂಡರು, ಕಾರ್ಯ­ಕರ್ತರು ಶನಿವಾರ ಕೆಪಿಸಿಸಿಗೆ ಮನವಿ ಸಲ್ಲಿಸಿರುವ ಮಾಹಿತಿಯನ್ನು ಪರ­ಮೇಶ್ವರ್‌ ಅವರು ಸಿದ್ದರಾಮಯ್ಯ ಅವರೊಂದಿಗೆ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೌನಕ್ಕೆ ಜಾರಿದ ಸಚಿವ
ಗೋಕಾಕ (ಬೆಳಗಾವಿ ಜಿಲ್ಲೆ): ‘ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ­ದಿಂದ ಸ್ಪರ್ಧಿಸಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರಕಟಿಸಿದರೂ ಅದೇ ವೇದಿಕೆಯಲ್ಲಿದ್ದ ಪ್ರಕಾಶ ಹುಕ್ಕೇರಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು.

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಬಳಿ ಕ್ಷೇತ್ರದ ಬ್ಲಾಕ್ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರ ಸಭೆಯಲ್ಲಿ ಜಾರಕಿಹೊಳಿ ಈ ವಿಷಯ ಪ್ರಕಟಿಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ­­ಯಾಗಲು ಹುಕ್ಕೇರಿ ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ, ‘ಅವರ ಮನವೊಲಿಸಿದ್ದು ಈಗ ಸ್ಪರ್ಧೆಗೆ ಒಪ್ಪಿ­ದ್ದಾರೆ’ ಎಂದು ಜಾರಕಿಹೊಳಿ ಬಹಿರಂಗಪಡಿಸಿದರು.
ಆದರೆ ಸಭೆಯಲ್ಲಿ ಹುಕ್ಕೇರಿ ಮೌನ ವಹಿಸಿರುವುದು ಅವರ ರಾಜಕೀಯ ನಡೆಯ ಕುರಿತು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಬೆಳಗಾವಿ ವರದಿ: ಈ ಗೊಂದಲ ಕುರಿತು ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ‘ಪ್ರಜಾವಾಣಿ’ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT