ADVERTISEMENT

ಕಬಡ್ಡಿ ಸದೃಢದ ಪ್ರತೀಕ: ಮಾಮನಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:00 IST
Last Updated 15 ಅಕ್ಟೋಬರ್ 2012, 7:00 IST

ಸವದತ್ತಿ: ಸದೃಢ ಶರೀರ ಹೊಂದುವುದರ ಜತೆಗೆ ಚಾಣಾಕ್ಷತೆ ಮತ್ತು ಜಾಗರೂಕತೆಯಿಂದ ಆಡುವ ದೇಸಿ ಆಟ ಕಬ್ಬಡ್ಡಿ ಎಂದು ಶಾಸಕ ಆನಂದ ಮಾಮನಿ ಹೇಳಿದರು. ಇಲ್ಲಿನ ಎಸ್.ಕೆ. ಹೈಸ್ಕೂಲ್ ಆವರಣದಲ್ಲಿ ನ್ಯೂ ಚಾಲೆಂಜರ್ಸ್‌ ಗ್ರೂಪ್ ಆಯೋಜಿಸಿದ್ದ ಚಂದ್ರಮಾ ಟ್ರೋಪಿ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಗಳು  ಭವಿಷ್ಯ ರೂಪಿಸುವುದರೊಂದಿಗೆ ಬದುಕು ಕಟ್ಟಿಕೊಡುವುದು. ಅಕ್ಷರ ಜ್ಞಾನದ ಜತೆಗೆ ಸಮಾಜದಲ್ಲಿ ಬದುಕುವುದನ್ನು ಕಲಿಸಿದ ಶಿಕ್ಷಕರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಲಿಸಿದ ಗುರುಗಳಿಗೆ ಸನ್ಮಾನ ಮಾಡಿದ್ದು ಸ್ವಾಗತಾರ್ಹವಾಗಿದೆ. ಬರುವ ದಿನಗಳಲ್ಲಿ ಯುವಕರು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಿ, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಕರೆದು ಗೌರವಿಸಿರಿ ಎಂದು ಸಲಹೆ ನೀಡಿದರು.

ಶಿಕ್ಷಣಾಧಿಕಾರಿ ಎಸ್.ಸಿ. ಕರಿಕಟ್ಟಿ ಮಾತನಾಡಿ, ಟಿ.ವಿ. ಮುಂದೆ ಕುಳಿತು. ಸೋಮಾರಿಯಾಗುವುದಕ್ಕಿಂತ ಮೈದಾನದಲ್ಲಿ ಮೈನೆವರೇಳುವಂತೆ ಸೆಣಸಾಡುವ ಕಬಡ್ಡಿ ಆಟ, ಯುಕ್ತಿ ಮತ್ತು ಶಕ್ತಿಯ ಸಮ್ಮೀಲನದ ಕ್ರೀಡೆಯಾಗಿದೆ ಎಂದರು.

ನಿವೃತ್ತ ಶಿಕ್ಷಕರಾದ ಎ.ಚ್. ಹೊಸಟ್ಟಿ, ವಿ.ಜೆ. ಪ್ರಸಾದ, ಎಂ.ಎಸ್. ಅಸುಂಡಿ, ಡಾ. ವಿರೂಪಾಕ್ಷ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ  ಅಂತರರಾಷ್ಟ್ರೀಯ ಪಟುಗಳನ್ನು ಸನ್ಮಾನಿಸಲಾಯಿತು.

ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಹೊಗಾರ, ವಿಶ್ವಾಸ ವೈದ್ಯ, ಶಿವಾನಂದ ಪಟ್ಟಣಶೆಟ್ಟಿ, ರಾಮಣ್ಣ ಬ್ಯಾಹಟ್ಟಿ, ಅನೀಲ ಸುಣಗಾರ, ವಿ.ಜೆ. ಹಿತ್ತಲಮನಿ, ಎಂ.ಟಿ. ಶಿಗ್ಲಿ, ಶಂಕರಗೌಡ ಪಾಟೀಲ ಹಾಜರಿದ್ದರು.
ಆನಂದ ಬಡಿಗೇರ ಪ್ರಾರ್ಥಿಸಿದರು. ಯಲ್ಲಪ್ಪ ಗೋರವನಕೊಳ್ಳ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಭವಾನಿ ಕುಂದುನಾಯಕ ವಂದಿಸಿದರು. ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಮಹಾರಾಷ್ಟ್ರಗಳಿಂದ 36 ತಂಡಗಳು ಭಾಗವಹಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.