ಖಾನಾಪುರ: `ಪೊಲೀಸರು ತರಬೇತಿ ಶಾಲೆಯಲ್ಲಿ ನೀಡುವ ತರಬೇತಿಯನ್ನು ಗಮನವಿರಿಸಿ ಪಡೆಯುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿ ಉತ್ತಮ ವ್ಯಕ್ತಿಯೆಂಬ ಹೆಸರು ಗಳಿಸಬೇಕು. ಜನರನ್ನು ವಿಶ್ವಾಸದಿಂದ ಕಾಣುವುದರ ಜೊತೆಗೆ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು~ ಎಂದು ರಾಜ್ಯ ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಮಹಾನಿರ್ದೇಶಕ ಸುಷಾಂತ ಮಹಾಪಾತ್ರ ಸಲಹೆ ನೀಡಿದರು.
ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ 20ನೇ ತಂಡದ ನಾಗರಿಕ (ಸಿವ್ಹಿಲ್) ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ತರಬೇತಿಯ ಸಮಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಊರು, ಜನರು ಮತ್ತು ಮನೆಯನ್ನು ಬಿಟ್ಟು 9 ತಿಂಗಳು ಇರಲು ಕಷ್ಟವಾದರೂ ತರಬೇತಿ ಅವಧಿಯಲ್ಲಿ ಅವರಿಗೆ ನೀಡಲಾಗುವ ಮಾಹಿತಿ, ಮಾರ್ಗದರ್ಶನ ಹಾಗೂ ಜ್ಞಾನ ತಮ್ಮ ಸೇವಾವಧಿಯ ಉದ್ದಗಲಕ್ಕೂ ಸಹಕಾರಿಯಾಗುತ್ತದೆ~ ಎಂದರು.
ಪ್ರಾಚಾರ್ಯ ಎಸ್.ಜಿ. ಓತಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. `ರಾಜ್ಯದ ವಿವಿಧ ಭಾಗಗಳಿಂದ ಆಯ್ದ 319 ಪ್ರಶಿಕ್ಷಣಾರ್ಥಿಗಳು 9 ತಿಂಗಳ ಬುನಾದಿ ತರಬೇತಿಗಾಗಿ ಈ ಶಾಲೆಗೆ ಆಗಮಿಸಿದ್ದು, ಅವರಲ್ಲಿ 126 ಜನ ಗುಲ್ಬರ್ಗ, 94 ಜನ ಶಿವಮೊಗ್ಗ, 74 ದಾವಣಗೆರೆ ಹಾಗೂ 25 ರಾಯಚೂರು ಜಿಲ್ಲೆಯಿಂದ ಆಗಮಿಸಿದ್ದಾರೆ. ತರಬೇತಿ ಶಾಲೆಯ 100ಕ್ಕೂ ಹೆಚ್ಚು ನುರಿತ ಬೋಧಕವರ್ಗ ಹಾಗೂ ಸಿಬ್ಬಂದಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದಾರೆ~ ಎಂದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ನಾಗರಾಜ ಒಂಟಿ, ಪ್ರಧಾನ ಕವಾಯತು ಬೋಧಕ ಎಸ್.ಐ ಬುಯ್ಯೊರ, ಬಾದರವಾಡಗಿ, ಪಾಂಡುರಂಗ, ಭೀಮನಗೌಡ, ತುಳಸಿ, ಲಾವರೆನ್ಸ್ ಡೆಪ್ಟನ್, ಹೆಚ್.ಹೆಚ್ ಪಾಟೀಲ, ತಂಗೋಡ, ರಾಜು ಕೆಂಚನಗೌಡ್ರ, ಕಳಕಪ್ಪ ಹಡಪದ, ಆರ್.ಬಿ ಸತ್ತಿಗೇರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಧಾನ ಕಾನೂನು ಬೋಧಕ ಹರಿಶ್ಚಂದ್ರ ನಿರೂಪಿಸಿದರು. ಡಿಎಸ್‌ಪಿ ಎಸ್.ಎಲ್. ನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.