ADVERTISEMENT

`ಕಲ್ಲು ತೂರಾಟ ಹಿಂದೆ ಸಚಿವರ ಕೈವಾಡ'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:52 IST
Last Updated 13 ಡಿಸೆಂಬರ್ 2012, 9:52 IST

ಬೆಳಗಾವಿ: `ಸುವರ್ಣ ವಿಧಾನ ಸೌಧದ ಎದುರು ಮಾದಿಗರು ಮಂಗಳವಾರ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆಯಲು ಸಂಪುಟದ ಕೆಲ ಸಚಿವರು ಕೆಲವು ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿರುವುದೇ ಕಾರಣವಾಗಿದೆ' ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿಯು ಆರೋಪಿಸಿದೆ.

ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿಯ ಸಮನ್ವಯ ಸಮಿತಿ ಅಧ್ಯಕ್ಷ ಎ. ಮುನಿಯಪ್ಪ, ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್,  ಪಾವಗಡ ಶ್ರೀರಾಮ್ ಅವರು ನಗರದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದರು.

`ಸದಾಶಿವ ಆಯೋಗದ ವರದಿಯನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಕೆಲ ಸಚಿವರಿಗೆ ವರದಿ ಅನುಷ್ಠಾನಗೊಳ್ಳುವುದು ಬೇಕಾಗಿರಲಿಲ್ಲ. ಹೀಗಾಗಿ ಸಚಿವರ ಕುಮ್ಮಕ್ಕಿನಿಂದ ಹಲವು ಕಿಡಿಗೇಡಿಗಳು ಪ್ರತಿಭಟನಾಕಾರರ ನಡುವೆ ಸೇರಿಕೊಂಡು ಗಲಾಟೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ನ್ಯಾಯಾಂಗ ತನಿಖೆಯನ್ನು ಕೈಗೊಳ್ಳುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಒತ್ತಾಯಿಸಿದರು.

`ಪೊಲೀಸರು ಮಾನವೀಯತೆಯನ್ನು ಮರೆತು ಅಮಾಯಕರ ಮೇಲೂ ಲಾಠಿ ಚಾರ್ಜ್ ಮಾಡಿದ್ದಾರೆ. ಸುಮಾರು ನಾಲ್ಕೈದು ಕಿ.ಮೀ. ದೂರದವರೆಗೆ ಓಡಾಡಿಸಿಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ನಾವು ಬಾಡಿಗೆ ಮಾಡಿಕೊಂಡು ತಂದಿದ್ದ ಸುಮಾರು 250ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕೂಡಲೇ ಈ ವಾಹನಗಳಿಗೆ ಉಂಟಾಗಿರುವ ಹಾನಿಯನ್ನು ಭರಿಸಿ ಕೊಡಬೇಕು. ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿ ಮಾಡಿ ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು' ಎಂದು ಆಗ್ರಹಿಸಿದರು.

`ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ, ಬಿಜೆಪಿ ಸರ್ಕಾರಕ್ಕೆ ಉಳಿಗಾಲವಿಲ್ಲ. ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಮಾದಿಗರು ಪ್ರತಿಭಟನೆಗೆ ಉಗ್ರ ಸ್ವರೂಪ ನೀಡಲಿದ್ದಾರೆ' ಎಂದು ಎಚ್ಚರಿಸಿದರು.

ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿಯು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಸ್. ಮಾರೆಪ್ಪ, ಎಚ್. ಹನುಮಂತಪ್ಪ, ಮರೀಶ ನಾಗಣ್ಣವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.