ADVERTISEMENT

ಕಾಂಗ್ರೆಸ್ ವೀಕ್ಷಕರ ಎದುರು ಬಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 10:08 IST
Last Updated 8 ಡಿಸೆಂಬರ್ 2012, 10:08 IST

ಬೆಳಗಾವಿ: ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಗರಕ್ಕೆ ಆಗಮಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವೀಕ್ಷಕರ ಎದುರು ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಬಲ ಪ್ರದರ್ಶಿಸಿದರು.

ನಗರದ ಕ್ಲಬ್ ರಸ್ತೆಯಲ್ಲಿರುವ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ವೀಕ್ಷಕರ ಎದುರು ಬೆಳಗಾವಿ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಹಾಜರಾಗಿ ಟಿಕೆಟ್ ತಮಗೇ ನೀಡುವಂತೆ ಕೋರಿಕೊಂಡರು. ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಪರ ಘೋಷಣೆಯನ್ನು ಕೂಗುತ್ತ ವೀಕ್ಷಕರ ಎದುರು ಹಾಜರಾಗಿದ್ದರಿಂದ ಕೆಲ ಕಾಲ ನೂಕು ನುಗ್ಗಲು ಉಂಟಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಂ. ರೇವಣ್ಣ ಮಧ್ಯ ಪ್ರವೇಶಿಸಿ, `ಸಭೆಗೆ ಆಗಮಿಸಿ ಹೀಗೆ ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಮಾಡುವುದರಿಂದ ಇನ್ನೊಬ್ಬರನ್ನು ಕೆರಳಿಸಬಾರದು. ಪಕ್ಷದ ರಾಷ್ಟ್ರೀಯ ನಾಯಕರಾದ ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರ ಪರ ಘೋಷಣೆ ಕೂಗಿರಿ. ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಹಾಕಿರಿ. ಒಗ್ಗಟ್ಟು ಪ್ರದರ್ಶಿಸಿ' ಎಂದು ಕಿವಿಮಾತು ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಸಿ. ಮಾಳಗಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ರಾಣಿ ಶುಗರ್ಸ್‌ ಉಪಾಧ್ಯಕ್ಷ ರಾಜು ಅಂಕಲಗಿ ಸೇರಿದಂತೆ ಸುಮಾರು 9 ಜನರು ಚುನಾವಣೆಯ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರಿಂದ ತೀವ್ರ ಕುತೂಹಲ ಕೆರಳಿಸಿತು.

ರಾಜು ಅಂಕಲಗಿ ಮಾತನಾಡಿ, `ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಸ್. ಎ. ಪಾಟೀಲರು ಶಾಸಕರಾದ ಬಳಿಕ ಕಾಂಗ್ರೆಸ್‌ಗೆ ಮತ್ತೆ ಗೆಲುವು ಲಭಿಸಿಯೇ ಇಲ್ಲ. ಪ್ರತಿ ಬಾರಿ 5- 6 ಆಕಾಂಕ್ಷಿಗಳು ಇರುತ್ತಾರೆ. ಇವರಲ್ಲಿ ಟಿಕೆಟ್ ವಂಚಿತ ಉಳಿದ ಆಕಾಂಕ್ಷಿಗಳೇ ಅಭ್ಯರ್ಥಿಯನ್ನು ಸೋಲಿಸಲು ಯತ್ನಿಸಿದರೆ, ಕಾಂಗ್ರೆಸ್ ಗೆಲ್ಲುವುದಾದರೂ ಹೇಗೆ? ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ, ಕಾರ್ಯಕರ್ತರಲ್ಲೂ ಒಗ್ಗಟ್ಟು ಇರುತ್ತದೆ.  ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನೇ ಗೆಲ್ಲಿಸಲು ಎಲ್ಲರೂ ಯತ್ನಿಸಬೇಕು' ಎಂದು ಕೋರಿದರು.

ಸಂಜಯ ಸಾತೇರಿ, `ಕಳೆದ ಬಾರಿ ಹಿರೇಬಾಗೇವಾಡಿ ಬ್ಲಾಕ್‌ಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಪಶ್ಚಿಮ ಭಾಗಕ್ಕೆ ಆದ್ಯತೆ ನೀಡಿ. ಶೇ. 70ರಷ್ಟು ಮರಾಠಿಗರಿದ್ದಾರೆ. ಹೀಗಾಗಿ ಮರಾಠಿ ಆಕಾಂಕ್ಷಿಗೇ ಟಿಕೆಟ್ ನೀಡಬೇಕು' ಎಂದು ಅಭಿಪ್ರಾಯಪಟ್ಟರು.

ಲಕ್ಷ್ಮೀ ಹೆಬ್ಬಾಳಕರ, `ನಾಲ್ಕು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನಾನೂ ಈ ಕ್ಷೇತ್ರದ ಆಕಾಂಕ್ಷಿ. ವೀಕ್ಷಕರು ಮರಾಠಿಗರಿಗೆ, ಲಿಂಗಾಯತರಿಗೆ, ಮಹಿಳೆಯರಿಗೆ ನೀಡಿದರೆ ಏನಾಗಬಹುದು ಎಂದು ಚರ್ಚಿಸಿ, ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಶಿಫಾರಸು ಮಾಡಲಿದ್ದಾರೆ' ಎಂದು ಹೇಳಿದರು.

`ಟಿಕೆಟ್ ಯಾರಿಗೇ ನೀಡಿದರೂ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ವೈರಿ ಬಿಜೆಪಿ ಹಾಗೂ ಶಾಸಕ ಸಂಜಯ ಪಾಟೀಲ ಆಗಬೇಕು. ಎಂಇಎಸ್‌ನವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು' ಎಂದು ಅಭಿಪ್ರಾಯಪಟ್ಟರು.

ಶಿವನಗೌಡ ಪಾಟೀಲ, `ಬರೀ ಹಣ ಇರುವುದನ್ನಷ್ಟೇ ಮಾನದಂಡವನ್ನಾಗಿ ಪರಿಗಣಿಸಬಾರದು. ಉತ್ತಮ ಗುಣ ಇರುವ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು' ಎಂದು ಕೋರಿದರು.

ಮಾಜಿ ಶಾಸಕ ಎಸ್.ಸಿ. ಮಾಳಗಿ, `ಎಸ್.ಎಂ. ಕೃಷ್ಣ ಕಾಂಗ್ರೆಸ್‌ಗೆ ಆಹ್ವಾನಿಸಿದ್ದರಿಂದ ಪಕ್ಷಕ್ಕೆ ಬಂದಿದ್ದೇನೆ. 2004 ಹಾಗೂ 2008ರ ಚುನಾವಣೆಯಲ್ಲಿ ಅತೃಪ್ತರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದರಿಂದ ನಾನು ಸೋತಿದ್ದೇನೆ. ನಮ್ಮ ಪಕ್ಷದೊಳಗೇ ಶತ್ರುಗಳಿದ್ದಾರೆ.

ಎಂಇಎಸ್‌ನವರು ಒಂದೇ ಅಭ್ಯರ್ಥಿ ನಿಲ್ಲಿಸಿದರೆ, ಗೆಲ್ಲುವುದು ಅಸಾಧ್ಯ' ಎಂದರು. `ನನಗೆ ಟಿಕೆಟ್ ನೀಡುವುದಿಲ್ಲ ಎಂದಾದರೆ, ಈ ಬಗ್ಗೆ ನನ್ನನ್ನು ಕರೆದು ಮೊದಲೇ ಚರ್ಚಿಸಿ. ನನ್ನ ಹಿಂದಿರುವ ಬೆಂಬಲಿಗರನ್ನು ನಾನು ಕೈ ಬಿಡಲಾರೆ. ಟಿಕೆಟ್ ಸಿಗದಿದ್ದರೆ, ಪಕ್ಷದೊಳಗೆ ಇದ್ದು ವಿರೋಧಿ ಕೆಲಸ ಮಾಡುವುದಿಲ್ಲ. ಅಗತ್ಯ ಬಿದ್ದರೆ, ಪಕ್ಷವನ್ನೇ ತೊರೆಯುತ್ತೇನೆ' ಎಂದು ನಾಯಕರಿಗೆ ಪರೋಕ್ಷವಾಗಿ ಎಚ್ಚರಿಸಿದರು.
ಸವದತ್ತಿಯಲ್ಲಿ 6 ಹಾಗೂ ಬೈಲಹೊಂಗಲದಲ್ಲಿ 4 ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಶಾಸಕ ರಾಜು ಅಲಗೂರ, ಕೆಪಿಸಿಸಿ ಉಪಾಧ್ಯಕ್ಷ ಎ. ಕೃಷ್ಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಪ್ರದೀಪ ಕುಶನೂರ, ರುಕ್ಮಿಣಿ ಸಾಹುಕಾರ ಅಭ್ಯರ್ಥಿ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.