ADVERTISEMENT

ಕಾಡಾ ಅಧ್ಯಕ್ಷರಿಂದ ಪ್ರವಾಹ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 6:55 IST
Last Updated 11 ಸೆಪ್ಟೆಂಬರ್ 2011, 6:55 IST

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಹಾಗೂ ರಾಯಬಾಗ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ಕಾಡಾ ಅಧ್ಯಕ್ಷ ಸೋಮಣ್ಣಾ ಬೇವಿನಮರದ ಹಾಗೂ ಆಡಳಿತಾಧಿಕಾರಿ ಡಾ. ಎ.ಜೆ. ಧುಮಾಳೆ ಕಾಡಾ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಶೀಲನೆ ನಡೆಸಿದರು.

ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಹಾಗೂ ರಾಯಬಾಗ ತಾಲ್ಲೂಕಿನ ದಿಗ್ಗೇವಾಡಿ, ಚಿಂಚಲಿ ಮುಂತಾದ ಗ್ರಾಮಗಳ ಪ್ರವಾಹದ ಪರಿಶೀಲನೆ ಮಾಡಿದರು.

ಕರ್ನಾಟಕ ನೀರಾವರಿ ನಿಗಮ ಹಾಗೂ ಕಾಡಾ ಇಲಾಖೆಯ ಕೃಷಿ ಅಧಿಕಾರಿಗಳು ಸಂಬಂಧಿಸಿದ ತಾಲ್ಲೂಕಿನ ತಹಸೀಲ್ದಾರರೊಂದಿಗೆ ಸಂಪರ್ಕದಲ್ಲಿದ್ದು, ಕಾಡಾ ಕೆಲಸಗಳಿಗೆ ಹಾನಿಯಾಗಿದ್ದರೆ ಅವರ ಗಮನಕ್ಕೆ ತರಬೇಕು. ಪರಿಹಾರ ಕಾರ್ಯದಲ್ಲಿ ಜಿಲ್ಲಾ ಆಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಸೂಚಿಸಿದರು.

ಕರ್ನಾಟಕ ನೀರಾವರಿ ನಿಗಮದ ಹಾಗೂ ಕಾಡಾ ಅಧಿಕಾರಿಗಳು ಈ ಸಂದರ್ಭದಲ್ಲಿ ಸೋಮಣ್ಣ ಬೇವಿನಮರದ ಹಾಗೂ ಎ.ಜೆ. ಧುಮಾಳೆ ಅವರಿಗೆ ಅಗತ್ಯ ಮಾಹಿತಿ ನೀಡಿದರು.

ಬಳಿಕ ಅವರು ಕಾಡಾದಡಿ ಕರ್ನಾಟಕ ನೀರಾವರಿ ನಿಮಗದಿಂದ ಕೈಗೊಂಡ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ಚಿಕ್ಕೋಡಿ: ಕೃಷ್ಣಾ ಪ್ರವಾಹದಲ್ಲಿ ಮುಳುಗಡೆಗೊಂಡು ಹಾನಿಗೀಡಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಾಲ್ಲೂಕಿನ ಅಂಕಲಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಸುರೇಶ ಪಾಟೀಲ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಕಲಿ ಗ್ರಾಮವೊಂದರ ವ್ಯಾಪ್ತಿಯಲ್ಲಿಯೇ 400 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಲಾಗಿದ್ದ ಕಬ್ಬು ಬೆಳೆ, ಕಟಾವಾಗದೇ ಉಳಿದ ಸೋಯಾಅವರೆ, ತರಕಾರಿ ಮುಂತಾದ ಬೆಳೆಗಳು ಜಲಾವೃತಗೊಂಡಿವೆ; ಇದರಿಂದ ರೈತರಿಗೆ ನಷ್ಟ ಉಂಟಾಗಲಿದೆ ಎಂದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಕಬ್ಬು ನಾಟಿ ಮಾಡಿದ್ದು, ಮೊಳಕೆಯೊಡೆದು ಹುಲುಸಾಗಿ ಬೆಳೆಯುತ್ತಿರುವ ಕಬ್ಬು ಪ್ರವಾಹದಲ್ಲಿ ಮುಳುಗಡೆಯಾಗಿದೆ; ಇದರಿಂದ ರೈತರಿಗೆ ಹಾಕಿದ ಬಂಡವಾಳವೂ ಕೈಗೆಟಕುವುದಿಲ್ಲ ಮತ್ತು ವರ್ಷದ ಬೆಳೆಯೇ ಹಾನಿಗೀಡಾಗಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಕಟಾವಾಗದೇ ಉಳಿದಿರುವ ಸೋಯಾಅವರೆ ಬೆಳೆಯೂ ಮುಳುಗಡೆಯಾಗಿದ್ದು, ಇದು ಸಂಪೂರ್ಣ ಕೊಳೆತು ಹೋಗಿ ರೈತರಿಗೆ ನಯಾಪೈಸೆ ಆದಾಯವೂ ಸಿಗುವುದಿಲ್ಲ. ಪ್ರವಾಹದಿಂದ ರೈತ ನಾನಾ ರೀತಿಯ ಕಷ್ಟನಷ್ಟಗಳನ್ನು ಅನುಭವಿಸುವಂತಾಗಿದ್ದು, ಸರ್ಕಾರ ಪ್ರವಾಹ ಇಳಿಮುಖವಾದ ನಂತರ ಪಾರದರ್ಶಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ ನ್ಯಾಯಯುತವಾದ ಪರಿಹಾರ ನೀಡಬೇಕು ಎಂದು ಶೈಲಜಾ ಪಾಟೀಲ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.