ಖಾನಾಪುರ: ಪೊಲೀಸರು ತಾವು ಪಡೆದ ಪ್ರತಿಜ್ಞೆಯ ಅರ್ಥವನ್ನು ಅರಿತುಕೊಂಡು ನಡೆದು ದೇಶ ಸೇವೆಗಾಗಿ ಧರ್ಮ, ಜಾತಿ, ರಾಜಕೀಯ ಹಿತಾಸಕ್ತಿಗಳ ಪ್ರಭಾವಕ್ಕೆ ಒಳಪಡದೇ ಕಾನೂನು ಚೌಕಟ್ಟಿನಡಿಯಲ್ಲಿ ಕೆಲಸ ನಿರ್ವಹಿಸಲು ಪಣ ತೊಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಕೆ ಶ್ರೀವಾತ್ಸವ ಕರೆ ನೀಡಿದರು.
ಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 19ನೇ ತಂಡದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
9ತಿಂಗಳ ಬುನಾದಿ ತರಬೇತಿಯನ್ನು ಪೂರೈಸಿದ 171 ನಾಗರಿಕ ಪೊಲೀಸರು ತರಬೇತಿ ಶಾಲೆಯಿಂದ ತಮ್ಮ ಮಾತೃ ಘಟಕಕ್ಕೆ ನಿರ್ಗಮಿಸಿದ ನಂತರ ನ್ಯಾಯಕ್ಕಾಗಿ ತಮ್ಮ ಬಳಿ ಬಂದ ಸಾರ್ವಜನಿಕರಿಗೆ, ಮಹಿಳೆಯರಿಗೆ, ದೀನದಲಿತರಿಗೆ, ವೃದ್ಧರಿಗೆ ಹಾಗೂ ನೊಂದವರಿಗೆ ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸುವಂತೆ ತಿಳಿಸಿದರು.
ರಾಜ್ಯ ಪೊಲೀಸ್ ತರಬೇತಿ ವಿಭಾಗದ ಮಹಾನಿರೀಕ್ಷಕ ಡಾ. ಎಸ್.ಪರಶಿವಮೂರ್ತಿ ತರಬೇತಿ ಶಾಲೆಯಿಂದ ಪ್ರಕಟಗೊಂಡ ‘ಕಾರ್ಯಕೌಶಲ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಪ್ರಾಂಶುಪಾಲ ಚಂದ್ರಶೇಖರ ಕ್ಯಾತನ್ ತರಬೇತಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ವರದಿಯನ್ನು ಓದಿದರು. ಬೆಳಗಾವಿಯ ಪ್ರೊಬೆಷ್‌ನರಿ ಐ.ಪಿ.ಎಸ್ ಅಧಿಕಾರಿ ಎಂ.ಎನ್. ಅನುಚೇತ ನಿರ್ಗಮನ ಪಥ ಸಂಚಲನದ ಮುಂದಾಳತ್ವ ವಹಿಸಿದ್ದರು. ಡಿಎಸ್‌ಪಿ ನಾಗರಾಜ ಒಂಟಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಖಾಜಾಬಂದೇನವಾಜ್ ಒಂಟಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಎಂದು ಹಾಗೂ ಪೂರ್ವ ವಿಭಾಗದ ಶಿವಕುಮಾರ ಬೆಂಗಳೂರಿನ ಡಿಜಿಪಿ (ತರಬೇತಿ) ಅವರ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರಶಿಕ್ಷಣಾರ್ಥಿಗಳು ಶೋ ಪಿ.ಟಿ, ಕರಾಟೆ, ಕಮಾಂಡೋ, ಪಿರಾಮಿಡ್ ಸೇರಿದಂತೆ ವಿವಿಧ ಪ್ರದರ್ಶನಗಳನ್ನು ನೀಡಿ ನೆರೆದ ಜನರ ಮನ ತಣಿಸಿದರು. ಗದಗ ಗ್ರಾಮೀಣ ಸಿಪಿಐ ಆರ್.ಎಸ್ ಉಜ್ಜನಕೊಪ್ಪ ನಿರೂಪಿಸಿದರು. ಡಿಎಸ್‌ಪಿ ಎಸ.ಬಿ ಅರಳಿಕಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.