ಖಾನಾಪುರ: ತಾಲ್ಲೂಕಿನ ಕಾಮಶಿನ ಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನ ಗಿರಿಜಾದೇವಿಯ ಜಾತ್ರೆಯಲ್ಲಿ ಪ್ರಾಣಿಗಳ ಬಲಿ ನಡೆಯದೇ ಜಾತ್ರೆಯು ಶಾಂತಿಯುತವಾಗಿ ಹಾಗೂ ಹಿಂಸೆ ಮುಕ್ತವಾಗಿ ನಡೆದಿದೆ.
ವಿಶ್ವ ಪ್ರಾಣಿ ದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮಿ ಮತ್ತು ತಂಡದವರ ವಿನಂತಿ, ಪೊಲೀಸ್ ಇಲಾಖೆಯ ಮುಂಜಾಗೃತಾ ಕ್ರಮ, ತಾಲೂಕು ಆಡಳಿತದ ಸಮರ್ಪಕ ನಿರ್ವಹಣೆ ಹಾಗೂ ಕಾಮಶಿನಕೊಪ್ಪ ಜನರ ಹೃದಯ ವೈಶಾಲ್ಯತೆಯಿಂದ ಮಚ್ಚಿನ ಏಟಿಗೆ ಬಲಿಯಾಗಬೇಲಿದ್ದ ಕೋಣ, ಕುರಿಯಾದಿಯಾಗಿ ನೂರಾರು ಪ್ರಾಣಿಗಳು ಪುನಃ ಪ್ರಾಣದಾನವನ್ನು ಪಡೆದಿವೆ.
ಸೋಮವಾರ ಮಧ್ಯರಾತ್ರಿ ಮೂಕಪ್ರಾಣಿ ಬಲಿಗಾಗಿ ಸಿದ್ಧಗೊಳಿಸಿದ್ದ ಸಂದರ್ಭದಲ್ಲಿ ಗಿರಿಜಾದೇವಿ ಮಂದಿರಕ್ಕೆ ತೆರಳಿದ ಸ್ವಾಮೀಜಿ ಮತ್ತು ಪೊಲೀಸರು ಗ್ರಾಮಸ್ಥರ ಮನವೊಲಿಸಿ ಬಲಿಗಾಗಿ ತಂದಿದ್ದ ಪ್ರಾಣಿಯನ್ನು ದಾನದ ರೂಪದಲ್ಲಿ ವಶಕ್ಕೆ ಪಡೆದು ಪಟ್ಟಣದ ಪೊಲೀಸ್ ಠಾಣೆಗೆ ತಂದಿದ್ದಾರೆ. ಇದನ್ನು ಘಟಪ್ರಭಾದಲ್ಲಿರುವ ಗೋಶಾಲೆಗೆ ಹಸ್ತಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ವ ಸಹೃದಯರ ಸಹಕಾರದೊಂದಿಗೆ ಕಾಮಶಿನಕೊಪ್ಪ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಥಮ ಪ್ರಾಣಿಬಲಿ ಮುಕ್ತ ಗ್ರಾಮವಾಗಿ ಹೊರಹೊಮ್ಮಿದ್ದು, ಶಾಂತಿಯುತ ಜಾತ್ರ ನಡೆದ ಕಾರಣ ಸಸ್ಯಾಹಾರಿಗಳು ಹಾಗೂ ಪ್ರಾಣಿಪ್ರಿಯರು ಮುಕ್ತಕಂಠದಿಂದ ಹೊಗಳುವ ತೆರದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.