ADVERTISEMENT

ಕುಸಿದ ಕಿತ್ತೂರು ಕೋಟೆಯ ರಕ್ಷಣಾ ಗೋಡೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:11 IST
Last Updated 14 ಡಿಸೆಂಬರ್ 2013, 5:11 IST

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಕೋಟೆಯ ಉತ್ತರ ಭಾಗಕ್ಕಿರುವ ರಕ್ಷಣಾ ಗೋಡೆಯ ಹೊರವಲಯದ ಪಾರ್ಶ್ವಭಾಗ ಶುಕ್ರವಾರ ಬೆಳಿಗ್ಗೆ ಕುಸಿದು ಬಿದ್ದಿದೆ.

ಬುರುಜು ಆಕಾರ ಹೋಲುತ್ತಿದ್ದ ಈ ಹಳೇ ಗೋಡೆಯ ಹೊರಭಾಗ ಕುಸಿದು ಬಿದ್ದಿರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ರಕ್ಷಣಾ ಗೋಡೆಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲು ಅನುಕೂಲವಾಗುವಂತೆ ಒಳಬದಿಯ ಗೋಡೆಯ ಗುಂಟ ಬೆಳೆದಿರುವ ಗಿಡ–ಮರಗಳನ್ನು ಯಂತ್ರದ ಮೂಲಕ ಉರುಳಿಸುವ ಕಾರ್ಯ ಸಾಗಿದ್ದು, ಇದರ ರಭಸಕ್ಕೆ ಹೊರಭಾಗದ ಗೋಡೆ ಕುಸಿದಿರಬಹುದು ಎಂದು ನಾಗರಿಕರು ಹೇಳುತ್ತಾರೆ.

ಕೋಟೆಯ ಒಳಾವರಣದ ಸುತ್ತಲೂ ಸಾಲು ಸಾಲಾಗಿ ಜೆಸಿಬಿ ಯಂತ್ರದ ಮೂಲಕ ಉರುಳಿಸಿರುವ ಗಿಡಗಳನ್ನು ಈಗ ಕಾಣಬಹುದಾಗಿದೆ. ಕಾಮಗಾರಿ ನೆಪದಲ್ಲಿ ಅಡಚಣಿಯಾಗದ ಗಿಡಗಳನ್ನೂ ನೆಲಕ್ಕೆ ಉರುಳಿಸುತ್ತಿರುವ ಗುತ್ತಿಗೆದಾರನ ಕ್ರಮ ಸರಿಯಾಗಿಲ್ಲ ಎಂಬ ದೂರುಗಳೂ ಇಲ್ಲಿ ಕೇಳಿ ಬರುತ್ತವೆ.

ನೆಲಕ್ಕೆ ಬಿದ್ದಿರುವ ಗಿಡಗಳ ಟೊಂಗೆಗಳನ್ನು ಕೆಲವರು ಉರುವಲಕ್ಕೆ ರಾತ್ರಿ ವೇಳೆ ಸಾಗಿಸುತ್ತಿದ್ದಾರೆ ಎಂಬ ಆರೋಪ ಸಹ ಮಾರ್ದನಿಸುತ್ತದೆ. ಕಾಮಗಾರಿಗೆ ಅಡಚಣಿಯಾಗುವ ಮರಗಳನ್ನು ಮಾತ್ರ ತೆಗೆಯಬೇಕು. ತೆಗೆದ ಮರಗಳನ್ನು ಹರಾಜು ಹಾಕಿ ಬಂದ ದುಡ್ಡನ್ನು ಮತ್ತೆ ಇಲ್ಲಿಯ ಅಗತ್ಯವಿರುವ ಕಾಮಗಾರಿಗೆ ಬಳಸಬೇಕು ಎಂಬುದು ಸ್ಥಳೀಯ ನಾಗರಿಕರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.