ADVERTISEMENT

‘ಕೈ’ ಒಗ್ಗಟ್ಟು: ಬಿಜೆಪಿಗೆ ತರುವುದೇ ಬಿಕ್ಕಟ್ಟು?

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ, ಕುತೂಹಲ ಕೆರಳಿಸಿದ ಕಣ

ಎಂ.ಮಹೇಶ
Published 4 ಮೇ 2018, 6:26 IST
Last Updated 4 ಮೇ 2018, 6:26 IST
‘ಕೈ’ ಒಗ್ಗಟ್ಟು: ಬಿಜೆಪಿಗೆ ತರುವುದೇ ಬಿಕ್ಕಟ್ಟು?
‘ಕೈ’ ಒಗ್ಗಟ್ಟು: ಬಿಜೆಪಿಗೆ ತರುವುದೇ ಬಿಕ್ಕಟ್ಟು?   

ನಿಪ್ಪಾಣಿ: ರಾಜ್ಯದ ಗಡಿಯಲ್ಲಿರುವ ನಿಪ್ಪಾಣಿ ಕ್ಷೇತ್ರದ ಚುನಾವಣಾ ಕದನ ಕಣದಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಕಂಡುಬಂದಿದೆ.

20013ರಲ್ಲಿ ನಡೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ‘ಕೈ’ ಮುಖಂಡರ ನಡುವೆ ಒಗ್ಗಟ್ಟು ಕಾಣಿಸುತ್ತಿದೆ. ಇದು, ಹಾಲಿ ಶಾಸಕಿ ಬಿಜೆಪಿಯ ಶಶಿಕಲಾ ಜೊಲ್ಲೆ ಅವರಿಗೆ ಬಲವಾದ ಹೊಡೆತ ನೀಡುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಈ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಚಾರ ನಡೆಸಿ ಹೋಗಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಉಂಟು ಮಾಡಿದೆ. ಈ ಮುಖಂಡರ ಅಲೆ ನೆಚ್ಚಿಕೊಂಡಿರುವ ಶಶಿಕಲಾ ಪ್ರಚಾರದಲ್ಲಿ ನಿರತವಾಗಿದ್ದಾರೆ.

1999, 2004, 2008ರಲ್ಲಿ ಸತತ 3 ಬಾರಿ ಗೆದ್ದು, ಹೋದ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲರಿಗೆ ಮುಖಂಡರ ಒಗ್ಗಟ್ಟಿನಿಂದ ‘ಬಲ’ ಬಂದಂತೆ ತೋರುತ್ತಿದೆ. ಮಾಜಿ ಶಾಸಕ ಸುಭಾಷ ಜೋಶಿ, ಸಂಸದ ಪ್ರಕಾಶ ಹುಕ್ಕೇರಿ, ಮುಖಂಡರಾದ ವೀರಕುಮಾರ ಪಾಟೀಲ, ಉತ್ತಮ ಪಾಟೀಲ, ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಇವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಹೋದ ಚುನಾವಣೆಯಲ್ಲಿ ಸೋತ ನಂತರ ಕಾಕಾಸಾಹೇಬ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ ಎನ್ನುವ ಅಸಮಾಧಾನವೂ ಜನರಲ್ಲಿದೆ. ಹಾಲಿ ಶಾಸಕರ ಬಗ್ಗೆಯೂ ನಿಪ್ಪಾಣಿ ಪಟ್ಟಣದ ನಿವಾಸಿಗಳಲ್ಲಿ ಅಷ್ಟೇನು ಸಮಾಧಾನವಿಲ್ಲ. ಅವರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ ಎನ್ನುವ ಮಾತುಗಳೂ ಇವೆ.‌

ADVERTISEMENT

ಎಂಇಎಸ್‌ ಪ್ರಭಾವವಿಲ್ಲ: ಒಂದು ಕಾಲದಲ್ಲಿ ಇಲ್ಲಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪ್ರಭಾವ ಈಗ ಕ್ಷೀಣಿಸಿದೆ. ಬಿಎಸ್‌ಪಿಗೆ ಅಷ್ಟೇನು ಶಕ್ತಿ ಇಲ್ಲ. ಅಭಿವೃದ್ಧಿ ಹಾಗೂ ಭಾಷೆಯ ವಿಚಾರವೇ ಇಲ್ಲಿನ ಪ್ರಮುಖ ಚುನಾವಣಾ ವಿಷಯವಾಗಿದೆ.

ಸಾಕ್ಷಾತ್‌ ಸಮೀಕ್ಷೆ ನಡೆಸುವ ಸಲುವಾಗಿ ‘ಪ್ರಜಾವಾಣಿ’ ಕ್ಷೇತ್ರದಲ್ಲಿ ಸುತ್ತಾಡಿದಾಗ ವ್ಯಕ್ತವಾದ ಅಭಿಪ್ರಾಯದ ಪ್ರಕಾರ, ಎರಡೂ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಇದೆ. ಮರಾಠಿ ಪ್ರಭಾವವಿರುವ ಈ ಕ್ಷೇತ್ರದಲ್ಲಿ ಆ ಭಾಷಿಕರ ಮನ ಗೆಲ್ಲುವುದಕ್ಕೆ ಇನ್ನಿಲ್ಲದ ಕಸರತ್ತುಗಳನ್ನು ಅಭ್ಯರ್ಥಿಗಳು ನಡೆಸುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ. ಬಿಜೆಪಿಗೆ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆಯಾದರೆ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ.

‘ನಿಪ್ಪಾಣಿ ಪಟ್ಟಣದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ದೊರೆತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಅವರು ವ್ಯಸನಗಳಿಗೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಾಗಿದೆ. ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಮಹಿಳೆಯರಿಗೆ ಉದ್ಯೋಗ ಒದಗಿಸಬೇಕಾಗಿದೆ. ಆದರೆ, ಈ ರೀತಿಯ ಪ್ರಯತ್ನಗಳು ನಡೆದಿಲ್ಲ’ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಶಾಸಕರು, ಪಟ್ಟಣಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳ ಕಡೆಗೆ ಹೆಚ್ಚಿನ ಒತ್ತು ನೀಡಿದರು. ಇಲ್ಲಿನ ಜನರ ಕೈಗೆ ಸಿಗಲಿಲ್ಲ ಎನ್ನುವ ದೂರುಗಳೂ ಇವೆ.ಪಕ್ಷೇತರರಾಗಿ ಕಣದಲ್ಲಿರುವ ಅಭ್ಯರ್ಥಿ ಸಂಭಾಜಿ ತೋರುವತ್‌ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ.

ತಂಬಾಕು ಬೆಳೆಗೆ ಪ್ರಸಿದ್ಧವಾಗಿರುವ ನಿಪ್ಪಾಣಿ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ನಗರಿಯಾಗಿಯೂ ಗುರುತಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಎಂಇಎಸ್‌ ಬೆಂಬಲಿಗರು 5 ಬಾರಿ ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸಿ ಗೆದ್ದಿದ್ದರು. ಕಾಂಗ್ರೆಸ್‌ 5, ಜನತಾದಳದ 2 ಹಾಗೂ ಬಿಜೆಪಿ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. ಒಮ್ಮೆ ಸೋತಿದ್ದ ಶಶಿಕಲಾ 2ನೇ ಯತ್ನದಲ್ಲಿ ಯಶಸ್ಸು ಕಂಡಿದ್ದರು. ಶಶಿಕಲಾ–ಕಾಕಾಸಾಹೇಬರ ನಡುವಿನ ಸತತ ಮೂರನೇ ಹೋರಾಟವಿದು. ಇಬ್ಬರೂ ಒಮ್ಮೊಮ್ಮೆ ಗೆದ್ದಿದ್ದಾರೆ. ಈ ಬಾರಿ ಮತದಾರರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.