ADVERTISEMENT

ಕೊಚ್ಚಿಹೋದ ಗ್ರಾಮಸ್ಥರ ಕನಸು

ನದಿಗೆ ಆಹುತಿಯಾದ ಬ್ಯಾರೇಜ್ ರಸ್ತೆ: ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 3:50 IST
Last Updated 13 ಜೂನ್ 2018, 3:50 IST
ಕೊಚ್ಚಿಹೋದ ಗ್ರಾಮಸ್ಥರ ಕನಸು
ಕೊಚ್ಚಿಹೋದ ಗ್ರಾಮಸ್ಥರ ಕನಸು   

ಬೈಲಹೊಂಗಲ: ತಾಲ್ಲೂಕಿನ ಬೇವಿನಕೊಪ್ಪ ಹಾಗೂ ಸಂಗೊಳ್ಳಿ ಗ್ರಾಮಗಳ ನಡುವಿನ ಮಲಪ್ರಭಾ ನದಿಗೆ ನಿರ್ಮಿಸಿದ್ದ ₹ 3.90 ಕೋಟಿ ಅನುದಾನದಲ್ಲಿ ಒಂದೂವರೆ ವರ್ಷದ ಹಿಂದಷ್ಟೇ ನಿರ್ಮಿಸಿದ್ದ ಕಿರು ಬ್ಯಾರೇಜ್ ಮೇಲಿನ ಸಿಮೆಂಟ್ ರಸ್ತೆ ಮಳೆಗೆ ಮಂಗಳವಾರ ಕೊಚ್ಚಿಹೋಗಿದ್ದು, ಉಭಯ ಗ್ರಾಮಸ್ಥರ ಕನಸೇ ನೀರಿನಲ್ಲಿ ಕೊಚ್ಚಿಹೋದಂತಾಗಿದೆ.

ಪಶ್ಚಿಮಘಟ್ಟದ ಖಾನಾಪುರ, ಕಣಕುಂಬಿಯಲ್ಲಿ ಮೂರು ದಿನಗಳ ಹಿಂದೆ ಸತತ ಸುರಿದ ಭಾರಿ ಮಳೆ, ಗಾಳಿಗೆ ಮಲಪ್ರಭಾ ನದಿ ಒಡಲು ತುಂಬಿ ನಳನಳಿಸುತ್ತಿದೆ. ಜೋರಾದ ಮಳೆ, ಗಾಳಿಗೆ ಬೇವಿನಕೊಪ್ಪ, ಸಂಗೊಳ್ಳಿ ಗ್ರಾಮಗಳ ಮಧ್ಯದ ಬ್ಯಾರೇಜ್ ಮೇಲೆ ನದಿ ನೀರಿನ ಒಳ ಹರಿವು ಹೆಚ್ಚಾಗಿದೆ.

ಬ್ಯಾರೇಜ್ ಕೆಳಗಿರುವ ಗೇಟಗಳನ್ನು ತೆಗೆಯದೆ ಬಿಟ್ಟಿದ್ದರಿಂದ ನದಿಯಲ್ಲಿನ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಕೊಚ್ಚಿ ಹೋಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನೀರಾವರಿ ಇಲಾಖೆ ಸಿಬ್ಬಂದಿ, ಜೆಸಿಬಿ ಮೂಲಕ ಬ್ಯಾರೇಜ್ ಗೇಟ್ ತೆಗೆದು ನೀರು ಹರಿದು ಹೋಗುವಂತೆ ಮಾಡಿದರು.

ADVERTISEMENT

ಬ್ಯಾರೇಜ್ ಮೇಲೆ ತುಂಬಿ ಹರಿಯುತ್ತಿದ್ದ ನದಿ ನೀರು ಕಣ್ತುಂಬಿಕೊಳ್ಳಲು ಗ್ರಾಮಸ್ಥರು, ವಾಹನ ಸವಾರರು ಕಿಕ್ಕಿರಿದು ತುಂಬಿದ್ದರು. ಸಂಪರ್ಕ ರಸ್ತೆ ನದಿಯಲ್ಲಿ ಕೊಚ್ಚಿ ಹೋಗಿದ್ದರಿಂದ ಕೆಲವರು ಗಾಬರಿಗೊಂಡ ದೃಶ್ಯ ಕಂಡು ಬಂದಿತು. ಯಾವುದೇ ಜೀವಹಾನಿ ಸಂಭವಿಸಿಲ್ಲ.

ಸೂಚನಾ ಫಲಕ ಅಳವಡಿಸಿ: ‘ಬ್ಯಾರೇಜ್ ಮೇಲಿನ ರಸ್ತೆ ಕೊಚ್ಚಿ ಹೋದ ಬಗ್ಗೆ ಸೂಚನಾ ಫಲಕ ಹಾಕಿ. ಇಲ್ಲದಿದ್ದರೆ ರಾತ್ರಿ ವೇಳೆ ಕಾರು, ದ್ವಿಚಕ್ರ ವಾಹನ ಸವಾರರು ರಸ್ತೆ ದಾಟುವಾಗ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ’ ಎಂದು ಗ್ರಾಮಸ್ಥರು, ವಾಹನ ಸವಾರರು ಅಧಿಕಾರಿಗಳನ್ನು ಆಗ್ರಹಿಸಿದರು.

ಆರಂಭವಾಗದ ಕಾಮಗಾರಿ

ಮೂರು ತಿಂಗಳ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹಾದೇವಪ್ಪ ಬ್ಯಾರೇಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ತುರ್ತಾಗಿ ಬಾಂದಾರ ನಿರ್ಮಾಣ ಕೆಲಸ ಆರಂಭಿಸುವುದಾಗಿಯೂ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಕೆಲಸ ಆರಂಭವಾಗಿಲ್ಲ.

ಬ್ಯಾರೇಜ್‌ಗೆ ಯಾವುದೇ ಹಾನಿಯಾಗಿಲ್ಲ. ನೀರಿನ ಒಳ ಹರಿವು ಕಡಿಮೆ ಆದ ಮೇಲೆ ರಸ್ತೆ ದುರಸ್ತಿಗೊಳಿಸಲಾಗುವುದು
- ಎಂ.ಬಿ.ಗಣಾಚಾರಿ, ನೀರಾವರಿ ಇಲಾಖೆ ಅಭಿಯಂತರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.