ADVERTISEMENT

ಕೋಥಳಿ ಗ್ರಾಮಕ್ಕೆ ನೈರ್ಮಲ್ಯ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 7:35 IST
Last Updated 23 ಮಾರ್ಚ್ 2011, 7:35 IST
ಕೋಥಳಿ ಗ್ರಾಮಕ್ಕೆ ನೈರ್ಮಲ್ಯ ರತ್ನ ಪ್ರಶಸ್ತಿ
ಕೋಥಳಿ ಗ್ರಾಮಕ್ಕೆ ನೈರ್ಮಲ್ಯ ರತ್ನ ಪ್ರಶಸ್ತಿ   

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲೂ ಸುಧಾರಣೆ ಕಾಣಬೇಕು. ಬಲಾಢ್ಯ ನಾಡಿನ ನಿರ್ಮಾಣಕ್ಕೆ ತಳಹದಿಯಾಗಬೇಕು ಎಂಬ ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯಲ್ಲಿ ಮಾದರಿ ಗ್ರಾಮವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮ ಪಂಚಾಯಿತಿ ಹೊರಹೊಮ್ಮಿದೆ. ಈಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಸದರಿ ಗ್ರಾಮ ಪಂಚಾಯಿತಿಗೆ ನೈರ್ಮಲ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

10 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರದಾನ ಮಾಡಿದರು. ಸಚಿವ ಜಗದೀಶ ಶೆಟ್ಟರ್, ಶಾಸಕ ಪ್ರಕಾಶ ಹುಕ್ಕೇರಿ, ಮಹಾಂತೇಶ ಕವಟಗಿಮಠ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದು, ಪ್ರಶಸ್ತಿ ಸ್ವೀಕರಿಸಿದರು.

ಇದೇ ಗ್ರಾಮಕ್ಕೆ ಮೂರು ವರ್ಷಗಳ ಹಿಂದೆ ನಿರ್ಮಲಗ್ರಾಮ ಪ್ರಶಸ್ತಿ ದೊರೆತಿತ್ತು. ಅದರ ಮುಂದುವರಿದ ಭಾಗವಾಗಿ ಪ್ರಸ್ತುತ ನೈರ್ಮಲ್ಯ ರತ್ನ ಪ್ರಶಸ್ತಿ ಬಂದಿದೆ.  ಗ್ರಾಮ ಬಯಲು ಮಲ ವಿಸರ್ಜನೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಇಲ್ಲಿನ ಎಲ್ಲ ಮನೆಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. ಗ್ರಾಮದ ಪ್ರತಿ ಮನೆಯವರು ತಮ್ಮ ಮನೆಯ ಮುಂದಿನ ಚರಂಡಿಯನ್ನು ತಾವೇ ಸ್ವಚ್ಛಗೊಳಿಸುತ್ತಾರೆ. ಮನೆಯ ಹಾಗೂ ಆವರಣದ ಕಸವನ್ನು ಕಸದ ಗುಂಡಿಯಲ್ಲಿ ಹಾಕುತ್ತಾರೆ. ಇಂತಹ ಕಸ ಸಂಗ್ರಹಣೆ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿ ಘನತ್ಯಾಜ್ಯ ನಿರ್ವಹಣಾ ತೊಟ್ಟಿ ಸ್ಥಾಪಿಸಲಾಗಿದೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ, ರಸ್ತೆಯ ಬದಿಯ ಗೋಡೆಗಳ ಮೇಲೆ ಶುಚಿತ್ವದ ಕುರಿತು ಚಿತ್ರಗಳು, ಗೋಡೆಬರಹಗಳು, ಘೋಷಣೆಗಳನ್ನು ಬರೆಯಲಾಗಿದೆ. ಎರೆಹುಳು ಗೊಬ್ಬರ ತಯಾರಿಕೆ, ಪ್ಲಾಸ್ಟಿಕ್ ಬಳಕೆ ನಿಷೇಧ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಕೋಥಳಿ ಗ್ರಾಮ ಪಂಚಾಯಿತಿ ನೈರ್ಮಲ್ಯ ರತ್ನ ಪ್ರಶಸ್ತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.