ADVERTISEMENT

ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚನೆ

ಅಕ್ರಮ ಮರಳು ದಂಧೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 9:37 IST
Last Updated 24 ಡಿಸೆಂಬರ್ 2013, 9:37 IST

ಅಥಣಿ: ಅಕ್ರಮ ಮರಳು ದಂಧೆ ಪತ್ತೆಯಾದ ಪ್ರಕರಣದಲ್ಲಿ ಜರುಗಿಸ­ಬೇಕಾದ ಕ್ರಮಗಳ ಬಗ್ಗೆ ಇದುವರೆಗಿದ್ದ ಗೊಂದಲಕ್ಕೆ ಸೋಮವಾರ ತೆರೆ ಎಳೆದಿ­ರುವ ಜಿಲ್ಲಾಧಿಕಾರಿ ಎನ್‌. ಜಯರಾಂ ಅಕ್ರಮ ಕಂಡು ಬಂದಲ್ಲಿ ಅಂಥ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ­ವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಚಿಕ್ಕೋಡಿ ಪ್ರಭಾರ ಉಪ ವಿಭಾಗಾಧಿಕಾರಿ ಎಮ್‌. ಪರಶುರಾಮ ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಅಕ್ರಮ ಮರಳು ದಂಧೆ ಪತ್ತೆಯಾ­ಗುವ ಪ್ರಕರಣಗಳಲ್ಲಿ ಈ ಮೊದಲು ದಂಧೆ ಕೋರರಿಂದ ದಂಡ ವಸೂಲಿ ಮಾಡಲು ಮಾತ್ರ ಅಧಿಕಾರಿಗಳಿಗೆ ಅವ­ಕಾಶವಿತ್ತು. ಆದರೆ ಪರಿಷ್ಕೃತ ಮರಳು ನೀತಿಯನ್ವಯ ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಉಸ್ತುವಾರಿ ಸಮಿತಿಯಲ್ಲಿರುವ ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ಇದೀಗ ಸೂಚನೆ ನೀಡಿರುವುದರಿಂದ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ಮುಂದುವರಿದಿರುವ ಅಕ್ರಮ ದಂಧೆಗೆ ಸದ್ಯ ಕಡಿವಾಣ ಬೀಳುವ ಎಲ್ಲ ಲಕ್ಷಣ ಕಂಡು ಬರುತ್ತಿದೆ.

ಏತನ್ಮಧ್ಯೆ ಸೋಮವಾರ ಬೆಳಿಗ್ಗೆ ಅಗ್ರಹಾರಿಣಿ ನದಿಯಿಂದ ಅಕ್ರಮವಾಗಿ ಮರಳು ಎತ್ತಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿ ಮೂರು ಲಾರಿ ಹಾಗೂ ಒಂದು ಟ್ರ್ಯಾಕ್ಟರ್‌ ವಶಕ್ಕೆ ತೆಗೆದುಕೊಂಡಿರುವ ಪ್ರಭಾರ ಉಪ ವಿಭಾಗಾಧಿಕಾರಿಗಳು, ಪ್ರಸ್ತುತ ಪ್ರಕರಣಗಳಿಗೆ ಸೀಮಿತವಾಗಿ ಮಾತ್ರ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.

ಉಸ್ತುವಾರಿ ಸಮಿತಿಯಲ್ಲಿ­ರುವ ಇಲಾಖೆಗಳ ಹೊರತಾಗಿಯೂ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಉಪವಿಭಾಗದ ಕೃಷ್ಣಾ ತೀರ ಮತ್ತು ಅಗ್ರಹಾರಿಣಿ ನದಿಗುಂಟ ತಾವು ಏಕಾಂಗಿಯಾಗಿ ನಡೆಸಿದ ಸತತ ದಾಳಿಯಲ್ಲಿ ಹಲವಾರು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿರುವುದರಿಂದ ಅಕ್ರಮ ಮರಳು ದಂಧೆ ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಇನ್ನು ಮುಂದೆ ಪತ್ತೆಯಾಗುವ ಪ್ರತಿ ಅಕ್ರಮ  ಪ್ರಕರಣಗಳಲ್ಲಿಯೂ ದಂಡದ ಬದಲು ಮೊಕದ್ದಮೆ ಹೂಡಲು ನಿರ್ಧರಿಸಿರುವುದರಿಂದ ಈ ಅಕ್ರಮ ದಂಧೆ ಕೆಲವೇ ದಿನಗಳಲ್ಲಿ ನಾಮಾವಶೇಷವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.