ADVERTISEMENT

‘ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ತಾರತಮ್ಯ ಮಾಡಿಲ್ಲ ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:24 IST
Last Updated 28 ನವೆಂಬರ್ 2017, 6:24 IST

ಗೋಕಾಕ: ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರ ತಾಲ್ಲೂಕಿನ ಬೀರನಗಡ್ಡಿ ಗ್ರಾಮದಲ್ಲಿ ನಡೆದ ₹. 45.25 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಕಳೆದ ವರ್ಷಗಳಿಂದ ಅರಭಾವಿ ಕ್ಷೇತ್ರದ ಜನರ ಜೊತೆ ಒಡನಾಟ ಹೊಂದಿದ್ದು, 2004ರಿಂದ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನಾಧ್ಯತೆ ನೀಡಿದ್ದೇನೆ.

ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಇನ್ನೂ ಹತ್ತು–ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದುಸರ್ಕಾರದಿಂದ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಇಲಾಖೆಗಳ ಸಹಾಯದಡಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದೇನೆ.

ಅಭಿವೃದ್ಧಿಯೇ ಮೂಲ ಮಂತ್ರ ತತ್ವದಡಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಅರಭಾವಿ ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದೇನೆ. ತಮ್ಮಲ್ಲಿರುವ ಸಣ್ಣ–ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

ADVERTISEMENT

ಡಿಸೆಂಬರ ತಿಂಗಳೊಳಗೆ ಲೋಳಸೂರ–-ಹುಣಶ್ಯಾಳ ಪಿಜಿವರೆಗೆ ರಸ್ತೆ ಸುಧಾರಣೆಯನ್ನು ಮಾಡಲಾಗುವುದು. ಮಹಿಳಾ ಸಂಘಗಳಿಗೆ ಸಹಾಯಧನ ವಿತರಿಸಲಾಗುವುದು. ಬೀರನಗಡ್ಡಿ ಗ್ರಾಮದ ಅಭಿವೃದ್ಧಿಗೆ ಇನ್ನೂ ಹಲವು ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಉದ್ಘಾಟನೆ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹. 6 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಸವೇಶ್ವರ ಸಮುದಾಯ ಭವನ, ನರೇಗಾ ಯೋಜನೆಯಡಿ ₹. 11.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ, ₹. 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾಮೂಹಿಕ ಶೌಚಾಲಯ ಹಾಗೂ ₹. 20 ಲಕ್ಷ ವೆಚ್ಚದಲ್ಲಿ ಎಸ್‌ಸಿಪಿ ಯೋಜನೆಯಡಿ ದಲಿತ ಸಮುದಾಯದ ರೈತರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ಪೈಪಲೈನ್ ಕಾಮಗಾರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು.

ಸಾನಿಧ್ಯವನ್ನು ಅರಭಾವಿಮಠದ ದುರದುಂಡೇಶ್ವರ ಪುಣ್ಯಾರಣ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸ್ಥಳೀಯ ಬಸಯ್ಯ ಪೂಜೇರಿ ವಹಿಸಿದ್ದರು. ಅತಿಥಿಗಳಾಗಿ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ದುಂಡಪ್ಪ ತೆಳಗಡೆ, ಕಲ್ಲಪ್ಪ ಪಾಗಾದ, ಅಪ್ಪಯ್ಯ ಸಂಪಗಾಂವ, ರಾಮಲಿಂಗ ಕಳಸನ್ನವರ, ಬಸವಣ್ಣಿ ತೆಳಗಡೆ, ಬಸಲಿಂಗ ತೆಳಗಡೆ, ಶಿವಪ್ಪ ದೊಡಕೆಂಚನವರ, ಶಿವಪುತ್ರ ಭರಮನ್ನವರ ಮತ್ತಿತರರು ಉಪಸ್ಥಿತರಿದ್ದರು.

ವಕೀಲ ಬಸವರಾಜ ಕೋಟಗಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೀರನಗಡ್ಡಿ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಸತ್ಕರಿಸಿ, ಗೌರವಿಸಿದರು.

ಗಮನಸೆಳೆದ ಬೈಕ್ ಜಾಥಾ: ಬೀರನಗಡ್ಡಿ ಗ್ರಾಮದ ನೂರಾರು ಕಾರ್ಯಕರ್ತರು ಬಳೋಬಾಳದಿಂದ ಬೀರನಗಡ್ಡಿ ವರೆಗೆ ಬೈಕ್ ಜಾಥಾನಡೆಸಿ ಸಾರ್ವಜನಿಕರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.