ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಪರ ಚಟುವಟಿಕೆ ನಡೆಯುವುದು ಎಂದರೆ ಅದೊಂದು ನುಡಿಹಬ್ಬ, ನುಡಿ ಸಂಭ್ರಮ. ಇಂತಹ ಎಷ್ಟೋ ಸಂಭ್ರಮಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡು ತಾನೂ ಸಂಭ್ರಮಪಟ್ಟು ಕನ್ನಡ ಮನಸ್ಸುಗಳನ್ನು ಸಂಭ್ರಮಿಸುವಂತೆ ಮಾಡಿದ ಹಿರಿಮೆಯ ಬೆಳಗಾವಿ ನೆಲದ್ದಾಗಿದೆ.
ಇದುವರೆಗೆ ನಡೆದ ಒಟ್ಟು 5 ಅಖಿಲ ಭಾರತ ಮತ್ತು 7 ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು; ರಾಜಧಾನಿ ಬೆಂಗಳೂರಿನಲ್ಲಿರುವ ಸರ್ಕಾರವನ್ನು ಬೆಳಗಾವಿಗೆ ತಂದು ಎರಡು ಸಲ ನಡೆಸಿದ ವಿಧಾನ ಮಂಡಲದ ಅಧಿವೇಶನಗಳು ಸಂಭ್ರಮದ ಪಟ್ಟಿಯ ಪ್ರಮುಖ ಘಟನಾವಳಿಗಳಾಗಿದೆ. ಇದೀಗ ಗಡಿ ಭಾಗವಾದ ನಿಪ್ಪಾಣಿಯಲ್ಲಿ ಜೂನ್ 22 ಹಾಗೂ 23ರಂದು ನಡೆಯುವ 8ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಮನಸ್ಸಿನ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಈ ವರ್ಷ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಬೇಕು ಎಂಬುದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಚ್ಛಾಶಕ್ತಿಯಾಗಿದೆ. ಈಗಾಗಲೇ 8 ತಾಲ್ಲೂಕುಗಳಲ್ಲಿ ಸಮ್ಮೇಳನಗಳನ್ನು ಏರ್ಪಡಿಸಿದ್ದು, 9ನೇ ತಾಲ್ಲೂಕಾಗಿ ಅಥಣಿಯಲ್ಲಿ ಜೂನ್ 24ರಂದು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಹತ್ತೂ ತಾಲ್ಲೂಕುಗಳಲ್ಲಿ ಸಮ್ಮೇಳನ ಏರ್ಪಡಿಸಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ.
ಸಮ್ಮೇಳನಗಳವೆಂದರೆ, ಒಂದು ದಿನದ ಜಾತ್ರೆ, ಊಟ, ಭಾಷಣಗಳಿಗೆ ಸೀಮಿತ ಎಂಬ ಭಾವನೆ ಇತ್ತೀಚೆಗೆ ಬೇರೂರಿದೆ. ಆದರೆ ತಾಲ್ಲೂಕು ಸಮ್ಮೇಳನಗಳಲ್ಲಿ ಮಂಡಿಸಿದ ಠರಾವುಗಳು ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿದೆ. ಎಲ್ಲ ತಾಲ್ಲೂಕು ಸಮ್ಮೇಳನಗಳಲ್ಲಿ ಬೆಳಗಾವಿಯ `ಸುವರ್ಣ ವಿಧಾನಸೌಧ'ಕ್ಕೆ ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರಗೊಳ್ಳಬೇಕು ಎಂಬ ಠರಾವು ಮಂಡಿಸಲಾಗಿದೆ. ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ದೇಶನೂರಿನಲ್ಲಿ ನಡೆದ ಮೊದಲನೇ ಬೈಲಹೊಂಗಲ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅವಸಾನದ ಅಂಚಿನಲ್ಲಿರುವ ಸ್ಮಾರಕ `ನಿರಂಜನಿ ಮಹಲ್'ಗೆ ಕಾಯಕಲ್ಪ ನೀಡಬೇಕು ಎಂಬ ಠರಾವು ಮಂಡಿಸಲಾಗಿತ್ತು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು, ಮುಂದಿನ ಸಮ್ಮೇಳನ ನಡೆಯುವುದರೊಳಗಾಗಿ ಈ ಸ್ಮಾರಕಕ್ಕೆ ಕಾಯಕಲ್ಪ ನೀಡುವುದಾಗಿ ಘೋಷಿಸಿದ್ದಾರೆ.
ನಿಪ್ಪಾಣಿಯಲ್ಲಿ ಜೂನ್ 22 ಹಾಗೂ 23ರಂದು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದುವರೆಗೆ ನಡೆದ ಏಳು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳ ಪಕ್ಷಿನೋಟವನ್ನು ನೋಡೋಣ.
ಬೆಳಗಾವಿ ನಗರದ ಕಲಾ ಮಂದಿರಲ್ಲಿ 1971ರ ಸೆಪ್ಟೆಂಬರ್‌ನಲ್ಲಿ ಮೊಟ್ಟ ಮೊದಲನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮೂಲಕ ಗಡಿ ಭಾಗದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿಯಾಯಿತು. ಇದರ ಅಧ್ಯಕ್ಷತೆಯನ್ನು ಡಾ. ಹಾ.ಮಾ. ನಾಯಕ ವಹಿಸಿದ್ದರು. ವರಕವಿ ಡಾ. ದ.ರಾ. ಬೇಂದ್ರೆ ಹಾಗೂ ಸಿದ್ಧಯ್ಯ ಪುರಾಣಿಕರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
1984ರ ಮೇ ತಿಂಗಳಲ್ಲಿ ಬೆಳಗಾವಿ ನಗರದ ಮಾಣಿಕಭಾಗ ಜೈನ್ ಹಾಸ್ಟೇಲ್‌ನಲ್ಲಿ ಎರಡನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಇದರ ಅಧ್ಯಕ್ಷತೆಯನ್ನು ಹಂಪನಾ ವಹಿಸಿದ್ದರೆ, ಉದ್ಘಾಟಕರಾಗಿ ಡಾ. ಯು.ಆರ್. ಅನಂತಮೂರ್ತಿ ಆಗಮಿಸಿದ್ದರು. ಡಾ. ಹಾ.ಮಾ.ನಾ. ಸಮರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
3ನೇ ಜಿಲ್ಲಾ ಮಟ್ಟದ ಸಮ್ಮೇಳನವು 1992ರ ಮಾರ್ಚ್‌ನಲ್ಲಿ ನಗರದ ಕಲಾಮಂದಿರದಲ್ಲಿ ಡಾ. ಎಂ.ಎಸ್. ಲಠ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ಬೈಲಹೊಂಗಲ ತಾಲ್ಲೂಕಿನ ತಿರುಳ್ಗನ್ನಡ ನಾಡೆಂದು ಹೆಸರಾದ `ವಕ್ಕುಂದ'ದಲ್ಲಿ 1999ನೇ ಸಾಲಿನ ಏಪ್ರಿಲ್‌ನಲ್ಲಿ ನಡೆದ 4ನೇ ಸಮ್ಮೇಳನದ ಅಧ್ಯಕ್ಷತೆಯನ್ನು ಬ.ಗಂ. ತುರವರಿ ವಹಿಸಿದ್ದರು. ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ 2006ರ ನವೆಂಬರ್‌ನಲ್ಲಿ ನಡೆದ 5ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಶ್ರೀರಾಮ ಇಟ್ಟಣ್ಣನವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
2010ರ ಮಾರ್ಚ್‌ನಲ್ಲಿ ಬೆಳಗಾವಿಯಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ವಹಿಸಿದ್ದರು. ಸಿದ್ಧೇಶ್ವರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಒಟ್ಟು ಐದು ಕೃತಿಗಳನ್ನು ಹೊರತರಲಾಗಿತ್ತು. ಜಿಲ್ಲೆಯ ಸುಮಾರು 70 ಸಾಹಿತಿ, ವಿದ್ವಾಂಸರನ್ನು ಸನ್ಮಾನಿಸಲಾಗಿತ್ತು.
2011ರ ಏಪ್ರಿಲ್‌ನಲ್ಲಿ ಕಿತ್ತೂರಿನಲ್ಲಿ ನಡೆದ 7ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಬಿ.ಎ. ಸನದಿ ವಹಿಸಿದ್ದರು. ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಚಂದ್ರಕಾಂತ ಕುಸುನೂರ ಸಮ್ಮೇಳನ ಉದ್ಘಾಟಿಸಿದ್ದರು.
22ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.
ಈ ಸಮ್ಮೇಳನದ ವಿಶೇಷತೆ ಎಂದರೆ ಗಡಿ ಭಾಗದಲ್ಲಿ ಕನ್ನಡ- ಮರಾಠಿ ಭಾಷಿಕರ ಬಾಂಧವ್ಯದ ಬೆಸುಗೆಯಾಗಿದೆ. ಈ ಹಿನ್ನೆಲೆಯಲ್ಲಿ ಬಹುಭಾಷಾ ಕವಿಗೋಷ್ಠಿ, ಗಡಿ ಭಾಗದ ಸಾಮರಸ್ಯ ಮತ್ತು ಸೌಹಾರ್ದತೆ, ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಮುಂತಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ದಲಿತ- ಬಂಡಾಯ ಕುರಿತ ಗೋಷ್ಠಿಯನ್ನೂ ಏರ್ಪಡಿಸಲಾಗಿದೆ.
ನಿಪ್ಪಾಣಿಯಂತಹ ಗಡಿಭಾಗದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಇದಾಗಿದೆ. 8ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ 8 ಲೇಖಕರ ಕೃತಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಇವುಗಳಲ್ಲಿ ಇಂಗ್ಲಿಷ್, ಮರಾಠಿ ಹಾಗೂ ಗುಜರಾತಿ ಭಾಷೆಗಳ ಕೃತಿಗಳೂ ಇವೆ.
ಯ.ರು. ಪಾಟೀಲ ಅಧ್ಯಕ್ಷರು, ಕಸಾಪ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.