ADVERTISEMENT

ಗಡಿ ಕಾಯಲು ಭೂಸೇನೆ ಸಶಕ್ತ

ಭೂಸೇನೆಯ ನಿವೃತ್ತ ಮುಖ್ಯಸ್ಥ ಜೆ.ಜೆ. ಸಿಂಗ್ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:33 IST
Last Updated 11 ಜೂನ್ 2013, 8:33 IST

ಬೆಳಗಾವಿ: `ದೇಶದ ಗಡಿ ಪ್ರದೇಶ ಹಾಗೂ ಜನರನ್ನು ರಕ್ಷಿಸಲು ಭಾರತೀಯ ಭೂಸೇನೆಯು ಸಶಕ್ತವಾಗಿದೆ' ಎಂದು ಭೂಸೇನೆಯ ನಿವೃತ್ತ ಮುಖ್ಯಸ್ಥ ಜೆ.ಜೆ. ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಮರಾಠಾ ಲಘು ಪದಾತಿದಳ ಕೇಂದ್ರದ ವೈ.ಜಿ. ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ತಮ್ಮ `ಸೋಲ್ಜರ್ ಟು ಜನರಲ್' ಆತ್ಮಕಥೆಯ ಮರಾಠಿ ಅನುವಾದಿತ ಕೃತಿ ಬಿಡುಗಡೆ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಬಾಹ್ಯ ದಾಳಿಯನ್ನು ಎದುರಿಸುವ ಎಲ್ಲ ಸಾಮರ್ಥ್ಯವು ಭಾರತೀಯ ಭೂಸೇನೆಗೆ ಇದೆ. ಈ ಬಗ್ಗೆ ಯಾವುದೇ ರೀತಿ ಭೀತಿ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.

`ಚೀನಾ ಹಾಗೂ ಭಾರತದ ನಡುವಿನ ಗಡಿ ಪ್ರದೇಶದ ಬಗ್ಗೆ ಮೊದಲೇ ಗುರುತು ನಿರ್ಮಾಣ ಆಗದೇ ಇರುವುದರಿಂದ ಇಂದು ಗಡಿ ಸಮಸ್ಯೆ ಕಾಡುತ್ತಿದೆ. ಎರಡೂ ದೇಶಗಳ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.

`ದ್ವಿಪಕ್ಷೀಯ ಮಾತುಕತೆಯ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಉತ್ತಮಗೊಳಿಸಬೇಕು. ಇದರಿಂದ ಎರಡೂ ದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ' ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, `ಸೇನೆಯಲ್ಲಿರುವ ಯೋಧರು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಭಾರತವನ್ನು ಸೂಪರ್ ಪವರ್ ಆಗಿ ಮಾಡಲು ಸಾಧ್ಯವಿದೆ ಎಂಬ ಅಂಶವನ್ನು ದೇಶದ ಜನರಿಗೆ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಕೃತಿಯನ್ನು ಬರೆದಿದ್ದೇನೆ' ಎಂದು ತಿಳಿಸಿದರು.

`ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಟ್ಟರೆ, ಸಾಧಿಸಲು ಸಾಧ್ಯವಿದೆ. ನನ್ನ ಅಜ್ಜ ಒಬ್ಬ ಸಾಮಾನ್ಯ ಯೋಧನಾಗಿದ್ದ. ಸಾಮಾನ್ಯ ಸಿಪಾಯಿಯ ಮೊಮ್ಮಗನೂ ಸೇನೆಯ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿದೆ ಎಂಬುದಕ್ಕೆ ನಾನೇ ಜೀವಂತ ನಿದರ್ಶನವಾಗಿದ್ದೇನೆ' ಎಂದು ಗದ್ಗದಿತರಾದರು.

`ಮರಾಠಾ ರೆಜಿಮೆಂಟ್ ಜೊತೆಗೆ ನನಗೆ ಆತ್ಮೀಯ ಸಂಬಂಧ ಇದೆ. ಸೇನೆಯ ಹಿರಿಯ ಅಧಿಕಾರಿಗಳು ಕೆಳಗಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ, ಸಾಮಾನ್ಯ ಯೋಧರಲ್ಲೂ ನಾಯಕತ್ವ ಗುಣ ಬೆಳೆಯಲು ಸಾಧ್ಯವಿದೆ' ಎಂದು ತಿಳಿಸಿದರು.

`ನನ್ನ ಆತ್ಮಕಥೆಯಲ್ಲಿ ಭೂಸೇನೆ ಇತಿಹಾಸ, ಭಾರತದ ಇತಿಹಾಸ ಒಳಗೊಂಡಿದೆ. ದೇಶಕ್ಕೆ ಸಂಬಂಧಿಸಿದ ಹಲವು ಯುದ್ಧಗಳ ಮಾಹಿತಿ ಇದರಲ್ಲಿದೆ.

ಇದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ವಿಜಯಾ ದೇವ್ ಅವರು ಸಾಹಿತ್ಯಪೂರ್ಣವಾಗಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ' ಎಂದು ಸಿಂಗ್ ತಿಳಿಸಿದರು.

  ಮರಾಠಾ ಲಘು ಪದಾತಿದಳ ಕೇಂದ್ರದ ಕಮಾಂಡಂಟ್ ಸಂತೋಷ ಕುರುಪ್, ಅಮೇಯ್ ಪ್ರಕಾಶನದ ಉಲ್ಲಾಸ ಹಾಜರಿದ್ದರು.

ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಜೆ.ಜೆ. ಸಿಂಗ್ ಅವರನ್ನು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಪದ್ಧತಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ಜೆ.ಜೆ. ಸಿಂಗ್ ಅವರ ಕೊಡುಗೆಯನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.