ADVERTISEMENT

ಗಮನ ಸೆಳೆದ `ವಚನ ಶತಕ'

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:59 IST
Last Updated 22 ಏಪ್ರಿಲ್ 2013, 6:59 IST

ಬೆಳಗಾವಿ: `ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ...'
ಬಸವ ಜಯಂತಿಯ ಶತಮಾನೋತ್ಸವದ ಅಂಗವಾಗಿ ಉಮಾ ಸಂಗೀತ ಶಾಲೆ ಹಾಗೂ ಕಲಾ ಗಂಗಾಧರ ಸಾಂಸ್ಕೃತಿಕ ವೇದಿಕೆಯು ಭಾನುವಾರ ನಗರದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ `ವಚನ ಶತಕ' ಕಾರ್ಯಕ್ರಮದಲ್ಲಿ ಈ ತರಹದ ಶರಣರ ನೂರು ವಚನಗಳು ಗಾಯನ ರೂಪದಲ್ಲಿ ತೇಲಿ ಬಂದವು.

ಸುಮಾರು 60 ಸಂಗೀತ ಕಲಾವಿದರು ಒಂದೊಂದೇ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ಗಾಂಧಿಭವನವು ವಚನಮಯವಾಗಿತ್ತು. ರಾಜ್ಯದಲ್ಲಿಯೇ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿರುವ ಪ್ರಥಮ ವಚನ ಸಂಗೀತ ಕಾರ್ಯಕ್ರಮ ಎಂಬುದು ಇದರ ಹೆಗ್ಗಳಿಕೆಯಾಗಿತ್ತು.

ಬೆಳಿಗ್ಗೆ 10ಗಂಟೆಗೆ ಆರಂಭವಾದ ಸಂಗೀತ ಕಾರ್ಯಕ್ರಮವು ಸಂಜೆ 6 ಗಂಟೆಯವರೆಗೂ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 60 ಸಂಗೀತ ಕಲಾವಿದರು ಪಾಲ್ಗೊಂಡು ಗಮನ ಸೆಳೆದರು. 4 ವರ್ಷದ ಮಗುವಿನಿಂದ 60 ವರ್ಷದವರೆಗಿನ ಕಲಾವಿದರು ವಚನಗಳನ್ನು ಹಾಡಿ ನೆರೆದಿದ್ದ ಕಲಾಸಕ್ತರಲ್ಲಿ ವಚನಗಳ ವೈಶಿಷ್ಟ್ಯ ಕುರಿತು ಅರಿವು ಮೂಡಿಸಿದರು. ಬಾಲಕಿಯರು ಪ್ರದರ್ಶಿಸಿದ ನೃತ್ಯಗಳು ಜನರನ್ನು ಆಕರ್ಷಿಸಿದವು.

ಹುನ್ನೂರಿನ ಬಸವಜ್ಞಾನ ಗುರುಕುಲದ ಈಶ್ವರ ಮಂಟೂರ ಕಾರ್ಯಕ್ರಮ ಉದ್ಘಾಟಿಸಿದರು. ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಮಂಗಲಾ ಸುರೇಶ ಅಂಗಡಿ `ವಚನ ಶತಕ' ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.