ಗೋಕಾಕ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ್ ಅನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು  ಆಗ್ರಹಿಸಿ ಗೋಕಾಕ ಜಿಲ್ಲಾ ನಿಯೋಜಿತ ಚಾಲನಾ ಸಮಿತಿ ಹಾಗೂ ವಕೀಲರ ಸಂಘ  ಕರೆ ನೀಡಿದ್ದ  ಗೋಕಾಕ ಬಂದ್ ಸೋಮವಾರ ಶಾಂತಿಯುತವಾಗಿತ್ತು.
ಸಮಿತಿಯ ಕರೆಗೆ ಸ್ಪಂದಿಸಿದ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ದ್ವಂದ್ವ ನಿರ್ಧಾರಗ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಕೀಲರ ಸಂಘದ ಸದಸ್ಯರು ಸೋಮವಾರವೂ ನ್ಯಾಯಾಲಯಗಳ ಕಲಾಪಗಳಲ್ಲಿ  ಪಾಲ್ಗೊಳ್ಳದೇ ಬಹಿಷ್ಕರಿಸಿದರು. ಕರವೇ ಕಾರ್ಯಕರ್ತರು  ಉರುಳು ಸೇವೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಖಾಸಗಿ ಮ್ಯಾಕ್ಸಿಕ್ಯಾಬ್ ಮತ್ತ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಳಗಿನಿಂದಲೇ ರಸ್ತೆಗಿಳಿಯದೇ ಬಂದ್ ಕರೆಗೆ ಸ್ಪಂದಿಸಿದವು.
ಅಂಗಡಿ ಮುಂಗ್ಗಟ್ಟುಗಳು, ಬ್ಯಾಂಕ್, ಹಣಕಾಸು ವ್ಯವಹಾರ ನಡೆಸುವ ಸಂಘ-ಸಂಸ್ಥೆಗಳು ತಮ್ಮ ದೈನಂದಿನ ವ್ಯವಹಾರ ನಡೆಸಲಿಲ್ಲ, ಚಿತ್ರ ಮಂದಿಗಳು ಹಾಗೂ ಪೆಟ್ರೋಲ್ ಬಂಕ್‌ಗಳು ಭಾಗಶಃ ಕಾರ್ಯ ನಿರ್ವಹಿಸಿದವು.
ಕಿಟಕಿ ಬಾಗಿಲು ತೆರೆದಿದ್ದ ರಾಷ್ಟ್ರೀಕೃತ ಬ್ಯಾಂಕ್‌ವೊಂದಕ್ಕೆ ಕೆಲವರು ಕಲ್ಲು ತೂರಿದ ಪರಿಣಾಮ ಗಾಜುಗಳು ಪುಡಿಯಾದವು. 
ಸಮಿತಿಯ ಕರೆಗೆ ಸ್ಪಂದಿಸಿ ಅಂಕಲಗಿ ಮತ್ತು ಘಟಪ್ರಭಾದಲ್ಲಿ ಬಂದ್ ಬೆಂಬಲಿಸಿ,  ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದ ವರದಿಗಳು ಬಂದಿವೆ. ಅದೇ ರೀತಿ ಕೌಜಲಗಿಯಲ್ಲಿ ನಾಗರಿಕರು  ಗೋಕಾಕ ತಾಲ್ಲೂಕನ್ನು ವಿಭಜಿಸಿ ಕೌಜಲಗಿಯನ್ನು  ತಾಲ್ಲೂಕು ಕೇಂದ್ರವನ್ನಾಗಿಸಬೇಕು ಎಂದು ಆಗ್ರಹಿಸಿ ಅಲ್ಲಿನ  ನಾಡ ಕಚೇರಿಗೆ ಮನವಿ ಅರ್ಪಿಸಿದರು. 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.