ADVERTISEMENT

ಗ್ರಾಮೀಣ ಮಕ್ಕಳ ಇಂಗ್ಲಿಷ್ ಚಿಲಿಪಿಲಿ...

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 8:25 IST
Last Updated 10 ನವೆಂಬರ್ 2012, 8:25 IST

ಒಂದು ಕಡೆ ಭಾರತೀಯ ಸಂಸ್ಕೃತಿ ಬಿಂಬಿಸುವ ದೃಶ್ಯಗಳು ಇನ್ನೊಂದೆಡೆ ಇಂಗ್ಲಿಷ್ ಭಾಷೆಯಲ್ಲಿ ಘಟನೆಗಳನ್ನು ಬಿತ್ತರಿಸುವ ಶೈಲಿ ನೆರೆದಿದ್ದ ಪಾಲಕರನ್ನು ವಿಸ್ಮಿತಗೊಳಿಸಿದವು.

ಮುಗ್ಧ ಮಕ್ಕಳ ಮನದಲ್ಲಿ ಅಡಗಿರುವ ಭಾವ ಮತ್ತು ಅವರ ಕೌಶಲವನ್ನು ಹೊರಗೆಡವಿ ಅವರಿಗೆ ಧೈರ್ಯ ತುಂಬುವ `ಅಸೆಂಬ್ಲಿ ಥೀಮ್~ ಅಡಿ ಪ್ರತಿಯೊಂದು ಮಗು ವಿಶಿಷ್ಟ ಎಂಬ ವಿನೂತನ ಕಾರ್ಯಕ್ರಮ ತಾಲ್ಲೂಕಿನ ಸಂಕೇಶ್ವರ ದುರದುಂಡೇಶ್ವರ ಎಸ್. ಎಸ್. (ಕೆ) ಪಾಟೀಲ `ಸಿಬಿಎಸ್‌ಸಿ~ ಶಾಲೆಯಲ್ಲಿ ಈಚೆಗೆ  ನಡೆಯಿತು.

ಪಾಲಕರು ತಮ್ಮ ಮಕ್ಕಳ ನೃತ್ಯ ನೋಡುವ, ಹಾಡು- ಭಾಷಣ ಕೇಳುವ ಕುತೂಹಲ ನೋಡುವಂತಿತ್ತು. ನೋಡಿದಾಗ ಗ್ರಾಮೀಣ ಭಾಗದಲ್ಲಿ ಇಂಥದೊಂದು ಕಾರ್ಯಕ್ರಮ ಜರುಗುವುದೆ ಎಂಬ ಕುತೂಹಲ  ಪಾಲಕರ, ಅದರಲ್ಲೂ ವಿಶೇಷವಾಗಿ ತಾಯಂದಿರ ಮನದಲ್ಲಿ ಮೂಡಿತ್ತು.

ಕಾರ್ಯಕ್ರಮ ರಂಗೇರಿದಂತೆ ಚಿಕ್ಕ ಮಕ್ಕಳ ಬಾಯಿಂದ ಉದುರಿದ ಇಂಗ್ಲಿಷ್ ಪದಗಳಿಗೆ ಚಪ್ಪಾಳೆಯ ಸ್ಫೂರ್ತಿ ದೊರೆತರೆ, ತಾಯಂದಿರ ಕಂಗಳಲ್ಲಿ ಭಾಷ್ಪಾಂಜಲಿ. ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನೃತ್ಯ ಮತ್ತು ದೇಶಭಕ್ತಿ ಗೀತೆಗಳು ಭಾರತೀಯ ಪರಂಪರೆ ಸಾರಿ ಹೇಳಿದವು. ಕಿರು ನಾಟಕ, ಹನುಮಂತನ ಮತ್ತು

ಭುವನೇಶ್ವರಿಯ ಏಕಪಾತ್ರಾಭಿನಯ, ಕಥೆ ಹೇಳುವ, ಹಣ್ಣು ಮತ್ತು ಕಾಯಿಪಲ್ಲೆಗಳ ಪರಿಚಯ ಮಾಡುವ, ಡೆಂಬಲ್ಸ್ ಆಟ, ಹಿಂದು-ಮುಂದೆ ಅಂಕಿ ಹೇಳುವ, ಅಕ್ಷರ ಜ್ಞಾನ ಕೊಡುವ ಕಾರ್ಯಕ್ರಮಗಳು ಪಾಲಕರ ಮತ್ತು ಸ್ವತಃ ಕಲಿಸಿದ ಶಿಕ್ಷಕರ ಮನ ಸೆಳೆದವು.

ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳು ಮಾಡಿದ ಅಸೆಂಬ್ಲಿ ಥೀಮ್ ನೃತ್ಯವಂತೂ ಆಕರ್ಷಕವಾಗಿತ್ತು. ಪಾಲಕರು ಸಂತಸ ಪಟ್ಟದ್ದು ಕಾರ್ಯಕ್ರಮದ ವಿಶೇಷತೆ ಆಗಿತ್ತು. ವೇದಿಕೆ ಎಂದರೆ ಹಿಂಜರಿಯುವ ಮತ್ತು ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿದ ಶಾಲೆಗೆ ಪಾಲಕರು ಕೃತಜ್ಞತೆ ಸಲ್ಲಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.