ADVERTISEMENT

ಚಿಕದಿನಕೊಪ್ಪ ಮತಗಟ್ಟೆಯಲ್ಲಿ ರಾತ್ರಿ 7.30ರವರೆಗೆ ಮತದಾನ!

​ಪ್ರಜಾವಾಣಿ ವಾರ್ತೆ
Published 13 ಮೇ 2018, 4:21 IST
Last Updated 13 ಮೇ 2018, 4:21 IST

ಖಾನಾಪುರ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 74.86ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಅಲ್ಲಲ್ಲಿ ಮತದಾನಕ್ಕೆ ನೂಕುನುಗ್ಗಲು, ಮತಯಂತ್ರಗಳಲ್ಲಿ ದೋಷ, ಸಂಜೆ 6ರ ನಂತರವೂ ಸರದಿಯಲ್ಲಿ ನಿಂತ ಮತದಾರರು ಮತ್ತಿತರ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿದೆ. ತಾಲ್ಲೂಕಿನ 249 ಮತಗಟ್ಟೆಗಳಲ್ಲಿ 2,05,959 ಮತದಾರರ ಪೈಕಿ 1,54,180 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.

ತಾಲ್ಲೂಕಿನ ಗರ್ಲಗುಂಜಿ, ಲೋಂಡಾ, ಹಂದೂರು ಮತ್ತು ಗಂದಿಗವಾಡ ಗ್ರಾಮಗಳ ಮತಗಟ್ಟೆಗಳಲ್ಲಿ ಶನಿವಾರ ಮುಂಜಾನೆ ಪ್ರಿ ಪೋಲ್ ಸಂದರ್ಭದಲ್ಲಿ ಇ.ವಿ.ಎಂ ಕೈಕೊಟ್ಟ ಕಾರಣ ಕೂಡಲೇ ಮತಗಟ್ಟೆಗಳಿಗೆ ದೌಡಾಯಿಸಿದ ಸೆಕ್ಟರ್ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿ ದೋಷಪೂರಿತ ಯಂತ್ರಗಳನ್ನು ತೆರವುಗೊಳಿಸಿ ಬದಲಿ ಇವಿಎಂ ಜೋಡಿಸುವ ಮೂಲಕ ಮತದಾನ ಸರಾಗವಾಗಿ ನಡೆಯುವಂತೆ ಕ್ರಮ ಕೂಗೊಂಡರು.

ADVERTISEMENT

ತಾಲ್ಲೂಕಿನ ಚಿಕದಿನಕೊಪ್ಪ ಗ್ರಾಮದ ಮತಗಟ್ಟೆಯಲ್ಲಿ ಸಂಜೆ 6 ಗಂಟೆಗೆ 200ಕ್ಕೂ ಹೆಚ್ಚು ಮತದಾರರು ಸರದಿಯಲ್ಲಿ ತಮ್ಮ ಹಕ್ಕು ಚಲಾಯಿಸಲು ನಿಂತಿದ್ದರು. ಚುನಾವಣಾ ಸಿಬ್ಬಂದಿ ಸರದಿಯಲ್ಲಿದ್ದ ಎಲ್ಲ ಮತದಾರರಿಗೂ ಮತ ಚಲಾವಣೆಗೆ ಅವಕಾಶ ಕೊಟ್ಟ ಕಾರಣ ಚಿಕದಿನಕೊಪ್ಪ ಮತಗಟ್ಟೆಯಲ್ಲಿ ರಾತ್ರಿ 7.30ರವಗೆರೆ ಮತದಾನ ನಡೆಯಿತು.

ಪಟ್ಟಣದ ಮಾರುತಿ ನಗರದ ಮತದಾರರು ತಮ್ಮ ಬಡಾವಣೆಯಲ್ಲಿ ಮೂಲ ಸೌಕರ್ಯ ಕೊರತೆಯ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಸುದ್ದಿ ತಿಳಿದ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾದ ಕಾರಣ ಸಂಜೆ 4ರ ನಂತರ ಬಡಾವಣೆಯ ಎಲ್ಲ ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.