ADVERTISEMENT

ಚಿಕ್ಕುಬಾಗ್‌ನಲ್ಲಿ ಗುಂಡಿಗಳದ್ದೇ ದರ್ಬಾರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:25 IST
Last Updated 6 ಫೆಬ್ರುವರಿ 2012, 8:25 IST
ಚಿಕ್ಕುಬಾಗ್‌ನಲ್ಲಿ ಗುಂಡಿಗಳದ್ದೇ ದರ್ಬಾರು
ಚಿಕ್ಕುಬಾಗ್‌ನಲ್ಲಿ ಗುಂಡಿಗಳದ್ದೇ ದರ್ಬಾರು   

ಬೆಳಗಾವಿ: ಬೆಳಗಾವಿ ನಗರ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವ ಜನಪ್ರತಿನಿಧಿಗಳು  ಕುವೆಂಪು ನಗರದ ಚಿಕ್ಕುಬಾಗ್‌ರಸ್ತೆಗಳಲ್ಲಿ ಒಮ್ಮೆ ಸಂಚರಿಸಬೇಕು; ಆಗ ನಗರ ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದರ ಅರಿವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಗೂ ಬಿಜೆಪಿಯ ಇನ್ನಿತರ ಮುಖಂಡರು ಬೆಳಗಾವಿಗೆ ಭೇಟಿ ನೀಡಿದಾಗಲೆಲ್ಲ ರಾಜ್ಯ ಸರ್ಕಾರ ನೀಡಿರುವ 100 ಕೋಟಿ ರೂಪಾಯಿಯಿಂದಾಗಿ ನಗರದ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ ಎಂದು ಬಣ್ಣಿಸುತ್ತಿದ್ದಾರೆ. ಆದರೆ, ನಗರದ ಹಲವೆಡೆ ರಸ್ತೆಗಳು ಬಾಯ್ತೆರೆದಿರುವುದನ್ನು ಕಂಡ ನಾಗರಿಕರು, `ರಸ್ತೆಗಳೆಲ್ಲ ಗುಂಡಿಗಳಿಂದ ಕೂಡಿರುವಾಗ ಹಣ ಎಲ್ಲಿಗೆ ಹೋಯಿತು~ ಎಂದು ಪ್ರಶ್ನಿಸುತ್ತಿದ್ದಾರೆ.

ನಗರದ ಹಲವೆಡೆ ರಸ್ತೆಗಳ ದುರಸ್ತಿ ಅಥವಾ ಮರು ಡಾಂಬರೀಕರಣವನ್ನು ಕೈಗೊಳ್ಳ ಬೇಕಾಗಿದೆ. ಆದರೆ, ಇದರ ನಿರ್ವಹಣೆ ಮಾಡಬೇಕಿರುವ ಮಹಾನಗರ ಪಾಲಿಕೆಯೂ ಜವಾಬ್ದಾರಿಯಿಂದ ದೂರ ಉಳಿದಿದೆ.

ನಗರದ ಎನ್.ಎ. ಹನಮಣ್ಣವರ ಮಾರ್ಗ ಸೇರಿದಂತೆ ಹಲವು ರಸ್ತೆಗಳನ್ನು ಮಹಾನಗರ ಪಾಲಿಕೆ ನಿರ್ಮಿಸಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಕನ್ನಡ ನಾಯಕ ದಿವಂಗತ ಎನ್.ಎ. ಹನಮಣ್ಣವರ ರಸ್ತೆಯನ್ನು ಕಂಡಾಗ `ರಾಜಕೀಯ~ ಹಾಗೂ `ಸುಳ್ಳು ಭರವಸೆ~ಗಳ ದರ್ಶನವಾಗುತ್ತದೆ.

ಹನುಮಾನ ನಗರ ಡಬಲ್ ರಸ್ತೆ ಹಾಗೂ ಬಾಕ್ಸೈಟ್ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆಯು ಕುವೆಂಪು ನಗರ 1ನೇ ಸ್ಟೇಜ್ ಹಾಗೂ 2ನೇ ಸ್ಟೇಜ್‌ವರೆಗೆ ಹರಡಿಕೊಂಡಿದೆ. ಈ ರಸ್ತೆಯು ಕ್ರಮವಾಗಿ ಬೆಳಗಾವಿ ಉತ್ತರ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿರುವುದೇ ರಸ್ತೆಯ ದುಸ್ಥಿತಿಗೆ ಕಾರಣವಾಗಿದೆ.

ಸ್ಟೇಜ್ 1 ಹಾಗೂ ಸ್ಟೇಜ್ 2ರ ಕೆಲವು ಭಾಗವು ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ವ್ಯಾಪ್ತಿಗೆ ಹಾಗೂ ಸ್ಟೇಜ್ 2ರ ಮತ್ತೆ ಕೆಲವು ಭಾಗವು ಬಿಜೆಪಿ ಎಂಎಲ್‌ಎ ಸಂಜಯ ಪಾಟೀಲರ ವ್ಯಾಪ್ತಿಗೆ ಒಳಪಡುತ್ತದೆ. ಸ್ಟೇಜ್ 1ರಲ್ಲಿ ಎಂಟು ತಿಂಗಳ ಹಿಂದೆ ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಗುಂಡಿಗಳೇ ಬಿದ್ದಿವೆ. ಸ್ಟೇಜ್ 2ರಲ್ಲೂ ಇದೇ ಪರಿಸ್ಥಿತಿ ಇದೆ.

ಇಲ್ಲಿ ಮತಕ್ಷೇತ್ರ ಬೇರೆ ಬೇರೆಯಾಗಿದ್ದರೂ ಇಡೀ ರಸ್ತೆಯು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಈ ಭಾಗದ ಜನರು ತಪ್ಪದೇ ಪಾಲಿಕೆಗೆ ಕರವನ್ನು ಪಾವತಿಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ಪಾಲಿಕೆ ಸದಸ್ಯರು ಸಹ ಪಕ್ಷಪಾತಿ ಧೋರಣೆ ತೋರುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಈ ಭಾಗದ ನಿವಾಸಿಗಳು ರಸ್ತೆ ದುರಸ್ತಿಗೊಳಿಸುವಂತೆ ಶಾಸಕ ಫಿರೋಜ್ ಸೇಠ್ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯವರೆಗೆ ಡಾಂಬರೀಕರಣ ಮಾಡಿಸಲು ಮುಂದಾಗಿದ್ದರು.

ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಫಿರೋಜ್ ಸೇಠ್‌ರಿಂದ ಮಾಡಿಸಬೇಕೊ ಅಥವಾ ಸಂಸದ ಸುರೇಶ ಅಂಗಡಿ ಮಾಡಬೇಕೊ ಎಂಬ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಗೊಂದಲ ಮೂಡಿತ್ತು. ಬಳಿಕ ಸಂಸದ ಸುರೇಶ ಅಂಗಡಿ ಭೂಮಿ ಪೂಜೆ ನೆರವೇರಿಸಿದರೆ, ಶಾಸಕ ಫಿರೋಜ್ ಸೇಠ್ ಕಾರ್ಯಕ್ರಮದಿಂದ ದೂರು ಉಳಿದಿದ್ದರು.

ಇಬ್ಬರು ನಾಯಕರ ನಡುವಿನ ರಾಜಕೀಯ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಕುವೆಂಪು ನಗರದ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಅದೇ ರೀತಿ ಹನುಮಾನ ನಗರ ಡಬಲ್ ರಸ್ತೆಯಿಂದ ಕುವೆಂಪು ನಗರವನ್ನು ಸಂಪರ್ಕಿಸುವ ಭಾಯಿ ದಾಜಿಬಾ ದೇಸಾಯಿ ರಸ್ತೆಯೂ ಸುಮಾರು ಎಂಟು ತಿಂಗಳಿನಿಂದ ಬಾಯ್ತೆರೆದುಕೊಂಡಿದ್ದರೂ ಪಾಲಿಕೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.