ADVERTISEMENT

ಚಿತ್ರಕಲಾ ಶಿಕ್ಷಕರ ಧರಣಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 8:58 IST
Last Updated 12 ಡಿಸೆಂಬರ್ 2012, 8:58 IST

ಸುವರ್ಣ ವಿಧಾನಸೌಧ (ಬೆಳಗಾವಿ): ಖಾಸಗಿ ಪ್ರೌಢಶಾಲೆಗಳಲ್ಲಿ ನೇಮಕಾತಿ ಹೊಂದಿರುವ ಚಿತ್ರಕಲೆ/ವೃತ್ತಿ ಶಿಕ್ಷಕರ ಹುದ್ದೆಗಳನ್ನು ಅನುದಾನಕ್ಕೊಳಪಡಿಸಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಖಾಸಗಿ ಪ್ರೌಢಶಾಲೆಗಳ ಚಿತ್ರಕಲೆ/ವೃತ್ತಿ ಶಿಕ್ಷಕರ ರಾಜ್ಯ ಹೋರಾಟ ಸಮಿತಿ ಸದಸ್ಯರು ಸುವರ್ಣ ವಿಧಾನಸೌಧದ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.

1987-88 ರಿಂದ 1994-95ರ ಸಾಲಿನವರೆಗೆ ಅನುದಾನಕ್ಕೊಳಪಟ್ಟಿರುವ ಖಾಸಗಿ ಪ್ರೌಢಶಾಲೆಗಳಲ್ಲಿ ಚಿತ್ರಕಲೆ, ವೃತ್ತಿ ಶಿಕ್ಷಕರ (ವಿಶೇಷ ಶಿಕ್ಷಕರು) ಹುದ್ದೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. 1987-88 ರಿಂದ 1994-95ನೇ ಸಾಲಿನವರೆಗೆ ಅನುದಾನಕ್ಕೆ ಒಳಪಟ್ಟಿರುವ ಖಾಸಗಿ ಪ್ರೌಢಶಾಲೆಗಳಲ್ಲಿ ಇತರೆ ವಿಷಯಗಳ ಹುದ್ದೆಗಳಂತೆ ಚಿತ್ರಕಲೆ. ವೃತ್ತಿ ಶಿಕ್ಷಕರನ್ನು ಪರಿಗಣಿಸಿ ವೇತನ ಅನುದಾನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

`ಚಿತ್ರಕಲೆ, ವೃತ್ತಿ ಶಿಕ್ಷಕರ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. 2000ನೇ ಇಸ್ವಿಯ ಫೆಬ್ರುವರಿ ತಿಂಗಳ ನಂತರ ಖಾಸಗಿ ಪ್ರೌಢಶಾಲೆಗಳಲ್ಲಿ ನೇಮಕಾತಿ ಹೊಂದಿದ ಚಿತ್ರಕಲೆ, ವೃತ್ತಿ ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಅನುದಾನ ನೀಡಬೇಕು' ಎಂದು ಸಮಿತಿ ಅಧ್ಯಕ್ಷ ಬಸವರಾಜ ಬೆಣ್ಣಿ ಒತ್ತಾಯಿಸಿದರು.

ಕಳೆದ ನವೆಂಬರ್ 26 ರಿಂದ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದ್ದ ಸಮಿತಿ ಸದಸ್ಯರು, ಸೋಮವಾರ (ಡಿ. 10) ಪಾದಯಾತ್ರೆ ಆರಂಭಿಸಿ ಮಂಗಳವಾರ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.

ರಾಜಶೇಖರ ಮೇಲ್ಮಠ, ವಿವೇಕಾನಂದ ಬಗದೆ, ವಿಶ್ವನಾಥ ಮಠದ, ಮಲ್ಲೇಶ ಮೈಸೂರು, ಸಿ.ಎಫ್.ತಿರಕಣ್ಣ ವರ, ಶಿವಾನಂದ ಗೋಟೆ, ಬಾಹುಬಲಿ ಕುಗನೋಳಿ, ವರದ ನಾಯಕ, ಈರಣ್ಣ ಯಕಲಾಸಪುರ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.