ADVERTISEMENT

ಜಿಎಸ್‌ಎಸ್‌ ವಿಷಮ ಸಿದ್ಧಿ ವ್ಯಕ್ತಿ: ಡಾ. ಕಲಬುರ್ಗಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:51 IST
Last Updated 6 ಜನವರಿ 2014, 6:51 IST

ಬೆಳಗಾವಿ: ‘ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ವಿಷಮ ಸಿದ್ಧಿಯನ್ನು ಹೊಂದಿದ ವ್ಯಕ್ತಿತ್ವವುಳ್ಳ ಸಾಹಿತಿಯಾಗಿದ್ದರು’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿ.ಎಸ್‌. ಶಿವರುದ್ರಪ್ಪ ಗೀತಗಾಯನ ಶ್ರದ್ಧಾಂಜಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಉತ್ತಮ ಕವಿಯಾದವನು ಒಳ್ಳೆಯ ವಿಮರ್ಶಕನಾಗಲಾರ; ಒಳ್ಳೆಯ ಶಿಕ್ಷಕನಾದವರು ಉತ್ತಮ ಆಡಳಿತಗಾರನಾಗಲಾರ ಎಂಬ ಪ್ರತೀತಿ ಇದೆ. ಈ ಎಲ್ಲ ನೆಲೆಗಳನ್ನು ಸಮೀಕರಿಸಿಕೊಂಡಿದ್ದ ಜಿಎಸ್‌ಎಸ್‌ ಕನ್ನಡ ಸಾರತ್ವತ ಲೋಕಕ್ಕೆ ಅನನ್ಯ ಕೊಡುಗೆಯಾಗಿದ್ದರು’ ಎಂದು ಹೇಳಿದರು.

‘ತಮ್ಮ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಲಿಲ್ಲ ಎಂಬ ಅಪಾರವಾದ ನಂಬಿಕೆ ಜಿಎಸ್‌ಎಸ್‌ ಅವರಲ್ಲಿತ್ತು. ಅವರು ಯಾವುದೇ ಕೆಲಸಕ್ಕಾಗಿ ರಾಜಕಾರಣಿಗೆ ಬಾಗಿರಲಿಲ್ಲ. ಕನ್ನಡವನ್ನು ತಾವು ನಿಂತ ನೆಲೆಯಲ್ಲಿಯೇ ಕಟ್ಟಿದ್ದರು’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿನದತ್ತ ದೇಸಾಯಿ, ‘ನವೋದಯ ಕಾಲದ ಶ್ರೇಷ್ಠ ಕವಿಯಾಗಿದ್ದ ಜಿಎಸ್‌ಎಸ್‌ ಎಳೆಯರನ್ನು ಪ್ರೋತ್ಸಾಹಿಸಿದರು. ಬಂಡಾಯ, ದಲಿತ ಸಾಹಿತಿಗಳನ್ನು ತುಂಬ ಪ್ರೀತಿಯಿಂದ ಬೆಳೆಸಿ, ಪ್ರೋತ್ಸಾಹಿಸಿದ್ದರು’ ಎಂದು ಸ್ಮರಿಸಿಕೊಂಡರು. 

‘ಜಿಎಸ್‌ಎಸ್‌ ಯಾವ ಕವಿಯನ್ನೂ ಹಗುರವಾಗಿ ಕಾಣಲಿಲ್ಲ. ಕುವೆಂಪು ಪ್ರಭಾವದಲ್ಲಿ ಬೆಳೆದರೂ, ತಮ್ಮದೇ ಆದ ವಿಶೇಷತೆಯನ್ನು ಸಾಹಿತ್ಯದಲ್ಲಿ ಬೆಳೆಸಿಕೊಂಡಿದ್ದರು’ ಎಂದು ಬಣ್ಣಿಸಿದ ದೇಸಾಯಿ, ತಮ್ಮ ಹಾಗೂ ಜಿಎಸ್‌ಎಸ್‌ ನಡುವಿನ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿದರು.

ನಂತರ ಕರ್ನಾಟಕ ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಜಯದೇವಿ ಜಂಗಮಶೆಟ್ಟಿ ಗೀತಗಾಯನ ನಡೆಸಿಕೊಟ್ಟರು. ಜಿಎಸ್‌ಎಸ್‌ ಅವರು ರಚಿಸಿದ ಭಾವಗೀತೆಗಳನ್ನು ಜಂಗಮಶೆಟ್ಟಿ ಅವರು ಶುಶ್ರಾವ್ಯವಾಗಿ ಹಾಗೂ ಭಾವಪೂರ್ಣವಾಗಿ ಹಾಡುವ ಮೂಲಕ ಅವರ ಸಾಹಿತ್ಯದ ಸವಿ ಉಣಬಡಿಸಿದರು. ತಬಲಾ ಸಾಥ್‌ ಅಲ್ಲಮಪ್ರಭು ಕಡಕೋಳ, ಹಾರ್ಮೊನಿಯಂ ಅರ್ಜುನ್‌ ವತ್ತಾರ, ತಂಬೂರಿ ವಿಜಯಲಕ್ಷ್ಮೀ ಸಾಥ್‌ ನೀಡಿದರು.

ಪ್ರತಿಷ್ಠಾನದ ಸದಸ್ಯರಾದ ಶಿರೀಷ ಜೋಶಿ ಸ್ವಾಗತಿಸಿದರು. ಇನ್ನೊಬ್ಬ ಸದಸ್ಯರಾದ ಡಾ. ರಾಮಕೃಷ್ಣ ಮರಾಠೆ ನಿರೂಪಿಸಿದರು.

‘ನಾನು– ನನ್ನ ಸಾಹಿತ್ಯ’
ಬೆಳಗಾವಿ:
‘ಕುಮಾರ ರಂಗಮಂದಿರದಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂಬ ಉದ್ದೇಶದಿಂದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಪ್ರತಿ ತಿಂಗಳ ಕೊನೆ ದಿನದಂದು ‘ನಾನು ಮತ್ತು ನನ್ನ ಸಾಹಿತ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಡಾ. ರಾಮಕೃಷ್ಣ ಮರಾಠೆ ಅವರು ಇದರ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಪ್ರಕಟಿಸಿದರು.

‘ಪ್ರತಿ ತಿಂಗಳ 15ನೇ ತಾರೀಖಿನಂದು ಸಂಗೀತ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುವುದು. ಶಿರೀಷ ಜೋಶಿ ಅವರು ಇದರ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT