ADVERTISEMENT

ಜಿಲ್ಲೆಯಾದ್ಯಂತ ಉತ್ತಮ ಮಳೆ

ಹಸಿಯಾದ ಭೂಮಿಯ ಮೇಲ್ಮೈ; ಬಿತ್ತನೆ ಬೀಜ, ಗೊಬ್ಬರ ತಂದಿಟ್ಟುಕೊಂಡ ರೈತರು

​ಪ್ರಜಾವಾಣಿ ವಾರ್ತೆ
Published 19 ಮೇ 2018, 5:36 IST
Last Updated 19 ಮೇ 2018, 5:36 IST
ಜಿಲ್ಲೆಯಾದ್ಯಂತ ಉತ್ತಮ ಮಳೆ
ಜಿಲ್ಲೆಯಾದ್ಯಂತ ಉತ್ತಮ ಮಳೆ   

ಬೆಳಗಾವಿ: ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಲವು ದಿನಗಳಿಂದ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಇದರಿಂದ ಬಿಸಿಲಿನ ಝಳ ಕಡಿಮೆಯಾಗಿದೆ ಹಾಗೂ ಕುಡಿಯುವ ನೀರಿನ ಕೊರತೆ ಕಾಡಲಿಲ್ಲ. ಸದ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಭೂಮಿಯ ಹದ ಮಾಡಲು ರೈತಾಪಿ ಜನರು ನಿರತರಾಗಿದ್ದಾರೆ.

ಪ್ರಸ್ತುತ ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸರಾಸರಿ 4.1 ಸೆಂ.ಮೀ ಮಳೆಯಾಗಿದೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ವಾಡಿಕೆ ಮಳೆ 0.6 ಸೆಂ.ಮೀ.ಗೆ ಹೋಲಿಸಿದರೆ 0.7 ಸೆಂ.ಮೀ ಮಳೆಯಾಗಿತ್ತು.  ಸುಮಾರು 0.1 ಸೆಂ.ಮೀ ಹೆಚ್ಚಾಗಿದೆ. ಏಪ್ರಿಲ್‌ನಲ್ಲಿಯೂ ಕೂಡ ವಾಡಿಕೆಗಿಂತ ಹೆಚ್ಚಾಗಿದೆ. ವಾಡಿಕೆ ಮಳೆ 2.9 ಸೆಂ.ಮೀ.ಗೆ ಹೋಲಿಸಿದರೆ 4.5 ಸೆಂ.ಮೀ ಮಳೆಯಾಗಿದೆ. 1.4 ಸೆಂ.ಮೀ ಹೆಚ್ಚು ಮಳೆಯಾಗಿದೆ. ಮಾರ್ಚ್‌ನಿಂದ ಮೇ 17ರವರೆಗೆ 9.3 ಸೆಂ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆಯಾದ 11.1ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಖಾನಾಪುರದಲ್ಲಿ ಹೆಚ್ಚು:

ADVERTISEMENT

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಖಾನಾಪುರದಲ್ಲಿ 14.8 ಸೆಂ.ಮೀ ಮಳೆಯಾಗಿದೆ. ವಾಡಿಕೆ ಮಳೆಗಿಂತ ಶೇ 30ರಷ್ಟು ಹೆಚ್ಚಾಗಿದೆ. ಬೆಳಗಾವಿಯಲ್ಲಿ 14.2 ಸೆಂ.ಮೀ, ಸವದತ್ತಿಯಲ್ಲಿ 12.6 ಸೆಂ.ಮೀ ನಂತರದ ಸ್ಥಾನ ಪಡೆದಿವೆ. ಅತಿ ಕಡಿಮೆ ಮಳೆಯು ರಾಮದುರ್ಗದಲ್ಲಿ ಆಗಿದೆ. ಇಲ್ಲಿ ಕೇವಲ 4.9 ಸೆಂ.ಮೀ. ಮಾತ್ರ ಆಗಿದೆ.

ಭೂಮಿ ಹದ:

ಇದೇ ತಿಂಗಳ ಕೊನೆಯ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಈಗ ಪೂರ್ವ ಮುಂಗಾರು ಮಳೆ ಬರುತ್ತಿದೆ. ಇದು ಹೊಲಗಳಿಗೆ ಸಹಕಾರಿಯಾಗಿದೆ. ಭೂಮಿಯ ಮೇಲ್ಮೈ ಹಸಿಯಾಗಿದೆ. ರೈತರು ರಂಟೆ ಹೊಡೆದು, ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಮಾಡಲು ರೈತರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ತಂದಿಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.