ADVERTISEMENT

‘ಜ್ಞಾನಿಗಳ ಮಾತು ಮಾರ್ಗದರ್ಶಿ ಸೂತ್ರ ಇದ್ದಂತೆ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 5:16 IST
Last Updated 27 ಅಕ್ಟೋಬರ್ 2017, 5:16 IST

ಚಿಕ್ಕೋಡಿ: ‘ಭಕ್ತಿಭಾವ, ಪ್ರೇಮ ಭಾವದಿಂದ ಮತ್ತು ಪರಿಶುದ್ಧವಾದ ಭಾವದಿಂದ ಈ ಜಗತ್ತನ್ನು ನೋಡಿ ಸಂತೋಷ ಪಡಬೇಕು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಬೇನಾಡಿ ಗ್ರಾಮದಲ್ಲಿ ಗುರುವಾರ ಅವರು ಆಧ್ಯಾತ್ಮಿಕ ಪ್ರವಚನ ನೀಡಿದರು.

‘ನಾವು ಬದುಕಿನಲ್ಲಿ ಕಮಲದಂತೆ ಅರಳಬೇಕು. ನಮ್ಮ ಸುತ್ತ ಮುತ್ತ ಸುಗಂಧ ಹರಡುವಂತಾಗಬೇಕು. ಎಲ್ಲವನ್ನು ಬಲ್ಲ ಜ್ಞಾನಿಗಳ ಮಾತುಗಳೇ ನಮಗೆಲ್ಲಾ ಮಾರ್ಗಸೂಚಿಗಳು. ಅವು ನಮ್ಮ ಬದುಕನ್ನು ಶ್ರೀಮಂತ ಗೊಳಿಸುತ್ತವೆ. ನಮ್ಮ ದೇಶದ ಅತಿ ದೊಡ್ಡ ಸಂಪತ್ತೇ ಜ್ಞಾನ ಸಂಪತ್ತು, ಬಲ್ಲವರ, ಸಂತರ. ಶರಣರ ಮಹಾತ್ಮರ ಮಾತುಗಳು ಎಷ್ಟೊಂದು ಅದ್ಭುತ. ಅವುಗಳು ನಮ್ಮನ್ನು ಆಕಾಶದೆತ್ತರಕ್ಕೆ, ಪ್ರಪಂಚದ ಎತ್ತರಕ್ಕೆ ನಮ್ಮ ಮನಸ್ಸನ್ನು ತೆಗೆದುಕೊಂಡು ಹೋಗುತ್ತವೆ. ಅಷ್ಟೇ ಅಲ್ಲದೇ ದಿವ್ಯವಾದ ವಸ್ತುವಿನ ಮಧ್ಯೆ ಬೆಳೆಸುವಂತಾಗು ತ್ತದೆ’ ಎಂದರು.

‘ಭಾರತ ದೇಶ ಬಾಹ್ಯದಲ್ಲಿ ಬಡ ರಾಷ್ಟ್ರವಾಗಿರಬಹುದು. ಜ್ಞಾನಾಂತರಂಗದಲ್ಲಿ ಅತಿ ಶ್ರೀಮಂತ ರಾಷ್ಟ್ರವಾಗಿದೆ. ಭಾರತವೆಂದರೆ ಕೇವಲ ಪದವಲ್ಲ. ಭಾ ಎಂದರೆ ಪ್ರಕಾಶ, ಅದು ಜ್ಞಾನದ ಸಂಕೇತ. ರತ ಎಂದರೆ ಅದರಲ್ಲಿ ಮುಳುಗಿದವರು ಎಂದರ್ಥ. ಭಾರತೀಯರೆಂದರೆ ಜ್ಞಾನ ಸಾಗರ ದಲ್ಲಿ ಮುಳುಗಿದವರೆಂಬ ಸಂದೇಶ ಸಾರುವಂಥದ್ದು.

ADVERTISEMENT

ಎಂಥ ಶ್ರೇಷ್ಠ ಸಂಸ್ಕೃತಿಯ ಜ್ಞಾನ ನಮ್ಮದು. ಆಧ್ಯಾತ್ಮಿಕ ಸಂಸ್ಕೃತಿ, ಪರಮಾರ್ಥ ಸಂಸ್ಕೃತಿಗಳೆಲ್ಲ ನಮ್ಮಲ್ಲಿವೆ. ಇಂಥ ಸಂಸ್ಕೃತಿಯಲ್ಲಿ ಮನುಷ್ಯ ದೊಡ್ಡವನಾಗಲೂ ಭಾರೀ ಕಾರ್ಯ ಮಾಡಬೇಕೆಂದಿಲ್ಲ. ತನ್ನ ಮನಸ್ಸನ್ನು ಸ್ವಚ್ಚ ಮಾಡಿಕೊಂಡರಾಯಿತು ಎಲ್ಲವೂ ಭವ್ಯವಾಗುತ್ತವೆ.

ಬದುಕಿಗೊಂದು ಸಾಧನೆ ಮಾಡಬೇಕು ಅದರಿಂದ ಫಲ ದೊರೆಯುತ್ತದೆ’ ಎಂದು ಹೇಳಿದರು. ‘ಬದುಕಿರೋವಷ್ಟು ದಿನ ನಾವು ಜೇನಿನಂತೆ ನಮ್ಮ ಬದುಕನ್ನು ಸಿಹಿಯಾಗಿ ಮಾಡಿಕೊಳ್ಳುವ ಅವಶ್ಯಕತೆಯಿದೆ’ ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.