ADVERTISEMENT

ತಂಬಾಕು ಬೆಳೆಗೆ ಮಾರಕವಾಗುತ್ತಿರುವ ಮಳೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 15 ಅಕ್ಟೋಬರ್ 2017, 5:42 IST
Last Updated 15 ಅಕ್ಟೋಬರ್ 2017, 5:42 IST
ತಂಬಾಕು ಬೆಳೆ
ತಂಬಾಕು ಬೆಳೆ   

ಚಿಕ್ಕೋಡಿ: ಕಳೆದೊಂದು ತಿಂಗಳಿನಿಂದ ದಿನವೂ ಬಿಡದೇ ಸುರಿಯುತ್ತಿರುವ ಮಳೆ ಕೃಷಿಕ ಸಮೂಹದಲ್ಲಿ ಸಂತಸದ ಅಲೆ ಸೃಷ್ಟಿಸಿದೆ. ಆದರೆ, ಗುಣಮಟ್ಟದ ತಂಬಾಕು ಉತ್ಪಾದನೆಗೆ ಪ್ರಸಿದ್ದಿಯಾಗಿರುವ ತಾಲ್ಲೂಕಿನ ತಂಬಾಕು ಬೆಳೆಗಾರ ಮಾತ್ರ ಮಳೆಯಿಂದ ಕಂಗಾಲಾಗಿದ್ದು, ತಗ್ಗು ಭೂಮಿಗಳಲ್ಲಿ, ಕಪ್ಪು (ಎರೆ) ಮಣ್ಣಿನ ಹೊಲದಲ್ಲಿ ಬೆಳೆದಿರುವ ತಂಬಾಕು ಅತಿಯಾದ ಮಳೆಯಿಂದಾಗಿ ಹಾನಿಗೀಡಾಗುವ ಆತಂಕ ಎದುರಿಸುತ್ತಿದ್ದಾನೆ.

ತಂಬಾಕು ನಿಷೇಧದ ಸರ್ಕಾರದ ಕ್ರಮ, ಹವಾಮಾನ ವೈಪರೀತ್ಯ, ವ್ಯಾಪಾರಿಗಳ ಶೋಷಣೆ, ಸಿಗದ ನ್ಯಾಯೋಚಿತ ಬೆಲೆ ಮೊದಲಾದ ಕಾರಣಗಳಿಂದಾಗಿ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ 60 ರಷ್ಟು ತಂಬಾಕು ನಾಟಿ ಕುಸಿದಿದೆ. ಏತನ್ಮದ್ದೆ ಈಗ ಬೆಳೆದು ನಿಂತಿರುವ ಬೆಳೆಗೆ ಮಳೆ ಕಂಟಕವಾಗಿ ಪರಿಣಮಿಸಿದೆ. ತಂಬಾಕು ಬೆಳೆ ಅತ್ಯಂತ ಸೂಕ್ಷ್ಮವಾಗಿದ್ದು, ಸತತ ಮಳೆಯಿಂದಾಗಿ ಭೂಮಿಯಲ್ಲಿ ನೀರು ಸಂಗ್ರಹವಾಗಿ ತಂಬಾಕು ಬೆಳೆ ಬೇರುಗಳು ಕೊಳೆಯುತ್ತಿದ್ದು, ಬೆಳೆ ಹಾನಿಗೀಡಾಗುತ್ತಿವೆ.

ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿ 13,500 ಹೆಕ್ಟೇರ್‌ ಉತ್ಪಾದನೆ ಮಾಡಲಾಗಿತ್ತು .ಆದರೆ, ಈ ವರ್ಷ ಕೇವಲ 5,085 ಹೆಕ್ಟೇರ್‌ಗೆ ಇಳಿದಿದೆ. ತಾಲ್ಲೂಕಿನ ಅಕ್ಕೋಳ, ಗಳತಗಾ, ಭೋಜ, ಖಡಕಲಾಟ, ಮಮದಾಪೂರ, ಹುನ್ನರಗಿ, ಸಿದ್ನಾಳ, ಬೇಡಕಿಹಾಳ, ಕೊಡ್ನಿ, ಶಮನೇವಾಡಿ, ನಾಗರಾಳ, ಮಲಿಕವಾಡ, ನಣದಿ, ನಣದಿವಾಡಿ, ಯಕ್ಸಂಬಾ, ನಾಯಿಂಗ್ಲಜ್‌ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ತಂಬಾಕು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಅಕ್ಕೋಳ, ಗಳತಗಾ, ಖಡಕಲಾಟ, ಮಮದಾಪೂರ ಗ್ರಾಮಗಳಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ತಂಬಾಕಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದೆ.

ADVERTISEMENT

ತಂಬಾಕು ಉತ್ಪಾದನೆ ಕಳೆದ 8 ವರ್ಷದಿಂದ ಕುಸಿಯುತ್ತಿರುವ ವಿವರ: 2010–11ರಲ್ಲಿ 17193 ರೈತರು 13755 ಹೆಕ್ಟೇರ್‌ ಬೆಳೆದಿದ್ದರು. 2011–12 ರಲ್ಲಿ 13,050 ರೈತರು 10,440 ಹೆಕ್ಟೇರ್‌, 2012-–13 ರಲ್ಲಿ 17,223 ರೈತರು 13,779 ಹೆಕ್ಟೇರ್‌, 2013-–14 ರಲ್ಲಿ 13,392 ರೈತರು 10,650 ಹೆಕ್ಟೇರ್‌ , 2014-–15 ರಲ್ಲಿ 13,552 ರೈತರು 10,882 ಹೆಕ್ಟೇರ್‌, 2015-–16 ರಲ್ಲಿ 6,985 ರೈತರು 7500 ಹೆಕ್ಟೇರ್‌, 2016-–17 ರಲ್ಲಿ 13,262 ರೈತರು 13500 ಹೆಕ್ಟೇರ್‌, ಆದರೆ, 2017–-18 ರಲ್ಲಿ 5128 ರೈತರು 5085 ಹೆಕ್ಟೇರ್‌ ಮಾತ್ರ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಹೇಳುತ್ತದೆ.

‘ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗೆ ವೈಜ್ಞಾನಿಕವಾದ ಬೆಲೆ ಸಿಗುತ್ತಿಲ್ಲ. ಸರ್ಕಾರ ತಂಬಾಕು ನಿಷೇಧದ ಕ್ರಮ ಕೈಗೊಳ್ಳುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯೂ ಕಾಡುತ್ತಿದೆ. ಹೀಗಾಗಿ ತಂಬಾಕು ಬೆಳೆಗಾರ ಪರ್ಯಾಯ ಬೆಳೆಯತ್ತ ವಾಲುತ್ತಿದ್ದು, ಇದರಿಂದಾಗಿ ವರ್ಷದಿಂದ ವರ್ಷಕ್ಕೆ ತಂಬಾಕು ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ರೈತ ಕುಮಾರ ಚೌಗಲಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.